CSK ಪಡೆಯನ್ನೇ ಒಂದು ಕ್ಷಣ ತಬ್ಬಿಬ್ಬು ಮಾಡಿದ ಈ ಅನೂಜ್ ರಾವತ್ ಯಾರು? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

First Published Mar 23, 2024, 3:33 PM IST

ಚೆನ್ನೈ: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಭರ್ಜರಿ ಚಾಲನೆ ಸಿಕ್ಕಿದೆ. ಮೊದಲ ಪಂದ್ಯದಲ್ಲೇ ಆರ್‌ಸಿಬಿ ತಂಡದ ವಿಕೆಟ್ ಕೀಪರ್ ಬ್ಯಾಟರ್ ಅನೂಜ್ ರಾವತ್ ಅಬ್ಬರದ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದಾರೆ. ಅಷ್ಟಕ್ಕೂ ಈ ಅನೂಜ್ ರಾವತ್ ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಭರ್ಜರಿ ಚಾಲನೆ ಸಿಕ್ಕಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ.

ಚೆಪಾಕ್‌ ಮೈದಾನದಲ್ಲಿ ಸಿಎಸ್‌ಕೆ ಎದುರು ಆರ್‌ಸಿಬಿ ಮುಗ್ಗರಿಸಿದರೂ, ತಂಡದ ಪ್ರತಿಭಾನ್ವಿತ ವಿಕೆಟ್ ಕೀಪರ್ ಬ್ಯಾಟರ್ ಅನೂಜ್ ರಾವತ್ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. 
 

ಸಿಎಸ್‌ಕೆ ಎದುರು ಟಾಸ್ ಗೆದ್ದ ಆರ್‌ಸಿಬಿ ಸ್ಪೋಟಕ ಆರಂಭ ಪಡೆಯಿತಾದರೂ, ಆ ಬಳಿಕ ಮುಸ್ತಾಫಿಜುರು ರೆಹಮಾನ್ ಮಾರಕ ದಾಳಿಗೆ ತತ್ತರಿಸಿ 78 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. 
 

ಈ ಸಂದರ್ಭದಲ್ಲಿ ಆರನೇ ವಿಕೆಟ್‌ಗೆ ಜತೆಯಾದ ದಿನೇಶ್ ಕಾರ್ತಿಕ್ ಹಾಗೂ ಅನೂಜ್ ರಾವತ್ ಜೋಡಿ ಆಕರ್ಷಕ 95 ರನ್‌ಗಳ ಜತೆಯಾಟವಾಡುವ ಮೂಲಕ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು.

ಡೆಲ್ಲಿ ಮೂಲದ ಕ್ರಿಕೆಟಿಗ ಅನೂಜ್ ರಾವತ್ ಕೇವಲ 25 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಸ್ಪೋಟಕ 48 ರನ್ ಸಿಡಿಸಿದರು. ಅಷ್ಟಕ್ಕೂ ಈ ಅನೂಜ್ ರಾವತ್ ಯಾರು ಗೊತ್ತಾ?

ಅನೂಜ್ ರಾವತ್ ಓರ್ವ ಎಡಗೈ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದಾರೆ. ಅನೂಜ್ ರಾವತ್ ಉತ್ತರಖಂಡ್‌ನ ನೈನಿತಾಲ್ ಮೂಲದವರು. ಪರ್ವತದ ತಪ್ಪಲಿನ ಸಣ್ಣ ಹಳ್ಳಿಯೊಂದರ ಹುಡುಗ ಈ ಅನೂಜ್ ರಾವತ್.

ತಮ್ಮ ಹಳ್ಳಿ ರೂಪುರ್‌ನಲ್ಲಿ ಯಾವುದೇ ಕ್ರಿಕೆಟ್ ಸೌಲಭ್ಯವಿರದ ಹಿನ್ನೆಲೆಯಲ್ಲಿ, ತಮ್ಮ ಊರಿನಿಂದ 5 ಕಿಲೋಮೀಟರ್ ದೂರದಲ್ಲಿರುವ ರಾಮ್‌ನಗರಕ್ಕೆ ಹೋಗಿ ಅಭ್ಯಾಸ ನಡೆಸುತ್ತಿದ್ದರು. ಇದಾದ ಬಳಿಕ ವೆಸ್ಟ್ ಡೆಲ್ಲಿ ಕ್ರಿಕೆಟ್ ಅಕಾಡೆಮಿಗೆ ಸೇರಿಕೊಂಡರು.

ವೆಸ್ಟ್ ಡೆಲ್ಲಿ ಕ್ರಿಕೆಟ್ ಅಕಾಡೆಮಿಯನ್ನು ವಿರಾಟ್ ಕೊಹ್ಲಿ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ನಡೆಸುತ್ತಿದ್ದರು. ತೀರಾ ಕಡುಬಡತನದ ಹಿನ್ನೆಲೆಯುಳ್ಳ ಅನೂಜ್ ರಾವತ್ ಕುಟುಂಬ ಸಾಲ ಮಾಡಿ ಓರ್ವ ವೃತ್ತಿಪರ ಕ್ರಿಕೆಟಿಗನಾಗಿಸಲು ಹರಸಾಹಸ ಮಾಡಿದರು. 

ಪೋಷಕರ ಶ್ರಮವನ್ನು ವ್ಯರ್ಥಮಾಡದೇ ಕ್ರಿಕೆಟ್ ಅಭ್ಯಾಸ ನಡೆಸಿದ ಅನೂಜ್ ರಾವತ್, ಭಾರತ ಅಂಡರ್-19 ತಂಡದಲ್ಲಿ ಸ್ಥಾನ ಪಡೆದರು. ಇದಾದ ಕೆಲ ಸಮಯದಲ್ಲೇ ಅಂಡರ್ 19 ತಂಡದ ನಾಯಕರಾಗಿಯೂ ಸೈ ಎನಿಸಿಕೊಂಡರು.

2017-18ರಲ್ಲ ರಣಜಿ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದ ಅನೂಜ್ ರಾವತ್ ಅವರನ್ನು 2021ರಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಬರೋಬ್ಬರಿ 80 ಲಕ್ಷ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು.

ಇದಾದ ಬಳಿಕ 2022ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಅನೂಜ್ ರಾವತ್‌ಗೆ 3.40 ಕೋಟಿ ರುಪಾಯಿ ನೀಡಿ ತನ್ನತ್ತ ಸೆಳೆದುಕೊಂಡಿತು. ಇದೀಗ 2024ರ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲೇ ಅನೂಜ್ ಫ್ರಾಂಚೈಸಿ ನಂಬಿಕೆ ಉಳಿಸಿಕೊಳ್ಳುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ.

click me!