ಆರ್‌ಸಿಬಿಗೆ ಕಪ್ ಗೆದ್ದು ಇದೀಗ ಆಸೀಸ್ ಪರ ಹೊಸ ಇತಿಹಾಸ ನಿರ್ಮಿಸಿದ ಪೆರ್ರಿ..!

First Published | Mar 22, 2024, 4:05 PM IST

ಬೆಂಗಳೂರು: ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆರ್‌ಸಿಬಿ ಗೆಲುವಿನಲ್ಲಿ ಎಲೈಸಿ ಪೆರ್ರಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ WPL ಮುಗಿದ ಬಳಿಕ ಆಸ್ಟ್ರೇಲಿಯಾ ತಂಡದ ಪರವೂ ಪೆರ್ರಿ ಹೊಸ ರೆಕಾರ್ಡ್ ನಿರ್ಮಿಸಿದ್ದಾರೆ.
 

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಅನುಭವಿ ಆಲ್ರೌಂಡರ್ ಎಲೈಸಿ ಪೆರ್ರಿ ಮಾರ್ಚ್ 21ರ ಶುಕ್ರವಾರದಂದು ಕಾಂಗರೂ ಪಡೆಯ ಪರ ಅಪರೂಪದ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು, ಎಲೈಸಿ ಪೆರ್ರಿ ಇದೀಗ ಮಹಿಳಾ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ ಅತಿಹೆಚ್ಚು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿದ ಆಟಗಾರ್ತಿ ಎನ್ನುವ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ.

Latest Videos


ಎಲೈಸಿ ಪೆರ್ರಿ ಇದೀಗ ಆಸ್ಟ್ರೇಲಿಯಾ ಪರ ಏಕದಿನ ಕ್ರಿಕೆಟ್‌ನಲ್ಲಿ 145 ಪಂದ್ಯಗಳನ್ನಾಡಿದ್ದಾರೆ. ಈ ಮೂಲಕ ಅಲೆಕ್ಸ್ ಬ್ಲಾಕ್‌ವೆಲ್ ಹೆಸರಿನಲ್ಲಿದ್ದ ದಾಖಲೆ(144)ಯನ್ನು ಅಳಿಸಿ ಹಾಕಿದ್ದಾರೆ.

WPL ಮುಗಿಸಿದ ಬಳಿಕ ಎಲೈಸಿ ಪೆರ್ರಿ ಬೆಂಗಳೂರಿಗೆ ಬರದೇ ನೇರವಾಗಿ ಬಾಂಗ್ಲಾದೇಶದತ್ತ ಮುಖಮಾಡಿದ್ದರು. ಮೀರ್‌ಪುರದಲ್ಲಿ ಬಾಂಗ್ಲಾದೇಶ ಎದುರಿನ ಮೊದಲ ಪಂದ್ಯಕ್ಕೆ ಪೆರ್ರಿ ಕಾಂಗರೂ ಪಡೆ ಕೂಡಿಕೊಂಡು ಈ ಸಾಧನೆ ನಿರ್ಮಿಸಿದ್ದಾರೆ.

ಆಸೀಸ್ ಅನುಭವಿ ಆಲ್ರೌಂಡರ್ ಆಗಿರುವ ಪೆರ್ರಿ, ಕಾಂಗರೂ ಪಡೆಯ ಪರ 145 ಏಕದಿನ ಪಂದ್ಯಗಳನ್ನಾಡಿ ಬ್ಯಾಟಿಂಗ್‌ನಲ್ಲಿ 3,896 ರನ್ ಬಾರಿಸಿದ್ದಾರೆ. ಇದಷ್ಟೇ ಅಲ್ಲದೇ ಬೌಲಿಂಗ್‌ನಲ್ಲಿ 163 ವಿಕೆಟ್ ಕಬಳಿಸಿದ್ದಾರೆ.

ಎಲೈಸಿ ಪೆರ್ರಿ ಇತ್ತೀಚೆಗಷ್ಟೇ ಮುಕ್ತಾಯವಾದ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅಮೋಘ ಪ್ರದರ್ಶನ ತೋರುವ ಮೂಲಕ ಮನೆಮಾತಾಗಿದ್ದರು.

ಎಲೈಸಿ ಪೆರ್ರಿ WPL ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. ಇನ್ನು ಇದಷ್ಟೇ ಅಲ್ಲದೇ ಮುಂಬೈ ಎದುರಿನ ಲೀಗ್ ಹಂತದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕೇವಲ 15 ರನ್ ನೀಡಿ 6 ವಿಕೆಟ್ ಕಬಳಿಸಿ ಮಿಂಚಿದ್ದರು.

click me!