Ab De Villiers Retires: ಕಳಚಿತು ಕ್ರಿಕೆಟ್ ಕೊಂಡಿ: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಎಬಿಡಿ ಗುಡ್‌ ಬೈ..!

First Published | Nov 19, 2021, 1:23 PM IST

ಬೆಂಗಳೂರು: ಕ್ರಿಕೆಟ್ ವಲಯದ ಅತಿದೊಡ್ಡ ಸುದ್ದಿಯೊಂದು ಹೊರಬಿದ್ದಿದ್ದು, ಮಿಸ್ಟರ್ 360 ಖ್ಯಾತಿಯ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ (Ab De Villiers) ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ (Retirement) ಘೋಷಿಸಿದ್ದಾರೆ. ಇದರೊಂದಿಗೆ ಕ್ರಿಕೆಟ್‌ ಜಗತ್ತಿನ ಸೂಪರ್ ಸ್ಟಾರ್ ಕ್ರಿಕೆಟಿಗನ ಯುಗಾಂತ್ಯವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ. 

ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್‌ ಎನಿಸಿಕೊಂಡಿದ್ದ ದಕ್ಷಿಣ ಆಫ್ರಿಕಾದ ಕ್ರಿಕೆಟರ್ ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್‌ ತಮ್ಮ ಎಲ್ಲಾ ಮಾದರಿಯ ಕ್ರಿಕೆಟ್ ವೃತ್ತಿಬದುಕಿಗೆ ಇಂದು(ನ.19) ವಿದಾಯ ಘೋಷಿಸಿದ್ದಾರೆ 

37 ವರ್ಷದ ಎಬಿಡಿ ತಮ್ಮ 17 ವರ್ಷಗಳ ವರ್ಣರಂಜಿತ ಕ್ರಿಕೆಟ್‌ ಬದುಕಿಗೆ ಟ್ವೀಟ್ ಮೂಲಕ ತೆರೆ ಎಳೆದಿದ್ದಾರೆ. ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್, 228 ಏಕದಿನ ಹಾಗೂ 78 ಟಿ20 ಪಂದ್ಯಗಳನ್ನಾಡಿದ್ದರು.

Tap to resize

AB de Villiers

ಇದೊಂದು ಅದ್ಭುತ ಪಯಣವಾಗಿತ್ತು. ಆದರೆ ಇದೀಗ ನಾನು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಲು ತೀರ್ಮಾನಿಸಿದ್ದೇನೆ ಎಂದು ಟ್ವೀಟ್‌ ಮೂಲಕ ಎಬಿಡಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ನಾನು ನನ್ನ ಹೃದಯಾಂತರಾಳದಿಂದ ಹಾಗೂ ಉತ್ಸಾಹದಿಂದ ಕ್ರಿಕೆಟ್ ಆಡಿದ್ದೇನೆ. ನನಗೀಗ 37 ವರ್ಷ ವಯಸ್ಸು, ಹೀಗಾಗಿ ದೀಪ ಇನ್ನೂ ಹೆಚ್ಚು ಪ್ರಕಾಶಮಾನವಾಗಿ ಉರಿಯಲು ಸಾಧ್ಯವಿಲ್ಲ ಎಂದು ಭಾವನಾತ್ಮಕವಾಗಿ ಎಬಿಡಿ ವಿದಾಯದ ಹಿನ್ನೆಲೆಯನ್ನು ತಿಳಿಸಿದ್ದಾರೆ.

ನನ್ನ ಕುಟುಂಬದವರ ತ್ಯಾಗದಿಂದಾಗಿಯೇ ನಾನಿದೆಲ್ಲವನ್ನು ಸಾಧಿಸಲು ಸಾಧ್ಯವಾಗಿದೆ. ನನ್ನ ಪೋಷಕರು, ಸಹೋದರರು, ಪತ್ನಿ ಡೇನಿಯಲ್ ಹಾಗೂ ನನ್ನ ಮಕ್ಕಳಿಗೆ ನನ್ನ ಮುಂದಿನ ಅಧ್ಯಾಯದಲ್ಲಿ ಹೆಚ್ಚಿನ ಸಮಯವನ್ನು ಮೀಸಲಿಡುತ್ತೇನೆ ಎಂದು ಎಬಿಡಿ ಹೇಳಿದ್ದಾರೆ.
 

ಇದೇ ಸಂದರ್ಭದಲ್ಲಿ ಎಲ್ಲಾ ಸಹ ಆಟಗಾರರು, ಎದುರಾಳಿ ಆಟಗಾರರು, ಪ್ರತಿಯೊಬ್ಬ ಕೋಚ್, ಫಿಸಿಯೋ ಮತ್ತು ಸಹಾಯಕ ಸಿಬ್ಬಂದಿಗಳಿಗೆ ನಾನು ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನಾನು ದಕ್ಷಿಣ ಆಫ್ರಿಕಾ, ಭಾರತ ಸೇರಿದಂತೆ ಎಲ್ಲೇ ಆಟವಾಡಲು ತೆರಳಿದರೂ ಅಲ್ಲಿ ಸಿಕ್ಕಂತಹ ಬೆಂಬಲವನ್ನು ನಾನು ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ನಾನು ಹರಿಣಗಳ ಪರವೇ ಇರಲಿ, ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದಂತೆ ಜಗತ್ತಿನ ನಾನಾ ಮೂಲೆಗಳಲ್ಲಿ ನನ್ನ ನಿರೀಕ್ಷೆಗೂ ಮೀರಿದ ಅವಿಸ್ಮರಣೀಯ ಅನುಭವಗಳು ಸಿಕ್ಕಿವೆ. ಇದೆಲ್ಲವಕ್ಕೂ ನಾನು ಋಣಿ ಎಂದು ಎಬಿಡಿ ಟ್ವೀಟ್ ಮಾಡಿದ್ದಾರೆ.

ಎಬಿ ಡಿವಿಲಿಯರ್ಸ್‌ 2018ರ ಮಾರ್ಚ್‌ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ಎನ್ನುವಂತೆ ವಿದಾಯ ಘೋಷಿಸಿದ್ದರು. ಇದಾದ ಬಳಿಕ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಅಮೋಘ ಪ್ರದರ್ಶನದ ಮೂಲಕ ಅಪಾರ ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಎನಿಸಿಕೊಂಡಿದ್ದರು.

ಐಪಿಎಲ್‌ನಲ್ಲಿ ಒಟ್ಟು 184 ಪಂದ್ಯಗಳನ್ನಾಡಿ 39.7ರ ಬ್ಯಾಟಿಂಗ್ ಸರಾಸರಿಯಲ್ಲಿ 5162 ರನ್‌ ಬಾರಿಸಿದ್ದರು. 2011ರಿಂದ ಎಬಿಡಿ, ಆರ್‌ಸಿಬಿ ತಂಡದ ಆಪತ್ಭಾಂಧವನೆನಿಸಿಕೊಂಡಿದ್ದರು.


ನಾನು ಕೊನೆಯವರೆಗೂ ಆರ್‌ಸಿಬಿ ಆಟಗಾರನಾಗಿಯೇ ಇರುತ್ತೇನೆ. ಬೇರೆ ತಂಡದ ಪರ ಆಡುವುದಿಲ್ಲ ಎಂದು ಈ ಹಿಂದೆ ಹಲವಾರು ಬಾರಿ ಪುನರುಚ್ಚರಿಸಿದ್ದರು. ಅದರಂತೆ ಇದೀಗ ಆರ್‌ಸಿಬಿ ಆಟಗಾರನಾಗಿಯೇ ಕ್ರಿಕೆಟ್‌ಗೆ ಎಬಿಡಿ ಗುಡ್‌ ಬೈ ಹೇಳಿದ್ದಾರೆ.

Latest Videos

click me!