ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಅಕ್ಟೋಬರ್ 24ರಿಂದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.
15 ಆಟಗಾರರ ತಂಡದಲ್ಲಿ ರೋಹಿತ್ ಶರ್ಮಾ, ಕೆ.ಎಲ್, ರಾಹುಲ್ ಹಾಗೂ ಇಶಾನ್ ಕಿಶನ್ ಹೀಗೆ ಮೂವರು ತಜ್ಞ ಆರಂಭಿಕ ಬ್ಯಾಟ್ಸ್‌ಮನ್‌ಗಳಿದ್ದು, ಈ ಪೈಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪರ ಇನಿಂಗ್ಸ್ ಆರಂಭಿಸುವವರು ಯಾರು ಎನ್ನುವುದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಇದೀಗ ಇಂಗ್ಲೆಂಡ್ ವಿರುದ್ದದ ಅಭ್ಯಾಸ ಪಂದ್ಯದ ಟಾಸ್ ವೇಳೆ ವಿರಾಟ್ ಕೊಹ್ಲಿ, ಐಪಿಎಲ್‌ನಲ್ಲಿ ಇನ್ನಿಂಗ್ಸ್ ಆರಂಭಿಸಿದಂತೆ ವಿಶ್ವಕಪ್‌ನಲ್ಲಿ ತಾವು ಆರಂಭಿಕನಾಗಿ ಆಡುವುದಿಲ್ಲ. ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ತಾವು 3ನೇ ಕ್ರಮಾಂಕದಲ್ಲಿ ಆಡುವುದಾಗಿ ವಿರಾಟ್ ಮಾಹಿತಿ ನೀಡಿದರು. ಐಪಿಎಲ್ 14ನೇ ಆವೃತ್ತಿಯ ಭಾಗ-1ರ ವೇಳೆ ಕೊಹ್ಲಿ, ವಿಶ್ವಕಪ್‌ನಲ್ಲಿ ತಾವು ರೋಹಿತ್ ಜೊತೆ ಆರಂಭಿಕನಾಗಿ ಆಡಲಿದ್ದೇನೆ ಎಂದಿದ್ದರು.
ಇತ್ತೀಚೆಗೆ ಮುಕ್ತಾಯಗೊಂಡ ಭಾಗ-2ರ ವೇಳೆ ತಮಗೆ ನಾಯಕ ಕೊಹ್ಲಿ ಆರಂಭಿಕನಾಗಿ ಆಡಲು ಸಿದ್ಧವಿರುವಂತೆ ಸೂಚಿಸಿದ್ದಾರೆ ಎಂದು ಇಶಾನ್ ಕಿಶನ್ ಬಹಿರಂಗಪಡಿಸಿದ್ದರು. ಹೀಗಾಗಿ, ಭಾರತ ತಂಡದ ಆರಂಭಿಕ ಜೋಡಿಯ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತಿತ್ತು. ಇದೀಗ ಕೊಹ್ಲಿ ಎಲ್ಲರ ಕುತೂಹಲಕ್ಕೆ ಉತ್ತರ ನೀಡಿದ್ದಾರೆ.
ಸೋಮವಾರ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಕ್ಕೂ ಮುನ್ನ ಟಾಸ್ ವೇಳೆ ಮಾತನಾಡಿದ ಕೊಹ್ಲಿ, ‘ಐಪಿಎಲ್‌ಗೂ ಮೊದಲು ಲೆಕ್ಕಾಚಾರ ಬೇರೆಯದ್ದೇ ಇತ್ತು. ಆದರೆ ಈಗ ರಾಹುಲ್‌ರನ್ನು ಬಿಟ್ಟು ಬೇರೆ ಆಯ್ಕೆಯತ್ತ ನೋಡುವುದು ಕಷ್ಟ. ರೋಹಿತ್ ನಿಸ್ಸಂದೇಹವಾಗಿ ಆರಂಭಿಕನ ಸ್ಥಾನದಲ್ಲಿ ಆಡಲಿದ್ದಾರೆ. ಅವರು ವಿಶ್ವ ಶ್ರೇಷ್ಠ ಆಟಗಾರ. ನಾನು 3ನೇ ಕ್ರಮಾಂಕದಲ್ಲಿ ಆಡುತ್ತೇನೆ. ಸದ್ಯಕ್ಕೆ ಇಷ್ಟು ಮಾತ್ರ ಹೇಳಬಲ್ಲೆ’ ಎಂದರು.
ಐಪಿಎಲ್ 14ನೇ ಆವೃತ್ತಿಯಲ್ಲಿ ರಾಹುಲ್ 628 ರನ್‌ಗಳೊಂದಿಗೆ ಗರಿಷ್ಠ ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದರು. ಅಲ್ಲದೇ ಟೂರ್ನಿಯಲ್ಲಿ ಅತಿಹೆಚ್ಚು ಸಿಕ್ಸರ್(30) ಸಿಡಿಸಿದರು.
ಇಂಗ್ಲೆಂಡ್ ವಿರುದ್ದದ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿತ್ತು. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆ.ಎಲ್. ರಾಹುಲ್ ಹಾಗೂ ಇಶಾನ್ ಕಿಶನ್ ಟೀಂ ಇಂಡಿಯಾ ಆರಂಭಿಕರಾಗಿ ಕಣಕ್ಕಿಳಿದು ಅಕ್ಷರಶಃ ಅಬ್ಬರಿಸಿದ್ದಾರೆ.
(photo source- Getty)
ಅಭ್ಯಾಸ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ವಿಕೆಟ್ ಒಪ್ಪಿಸಿದರೆ, ಇಶಾನ್ ಕಿಶನ್ 46 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 70 ರನ್ ಬಾರಿಸಿ ಗಮನ ಸೆಳೆದಿದ್ದಾರೆ.
(photo source- Getty)