ಮೈದಾನದಲ್ಲಿದ್ದಾಗ ಹಾಗೂ ಮೈದಾನದಲ್ಲಾಚೆಗೆ ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್ ಹಾಗೂ ಸೌರವ್ ಗಂಗೂಲಿ ಉತ್ತಮ ಸ್ನೇಹಿತರಾಗಿದ್ದರು. ಉತ್ತಮ ಸ್ನೇಹಿತರೂ ಎನ್ನುವುದಕ್ಕಿಂತ ಹೆಚ್ಚಾಗಿ ಒಂದು ರೀತಿ ಗುರು-ಶಿಷ್ಯರ ರೀತಿಯ ಸಂಬಂಧ ಇವರದ್ದಾಗಿತ್ತು.
ಈ ಹಿಂದಿನ ಹಲವು ಸಂದರ್ಶನಗಳಲ್ಲಿ ಸಹಾ ವೀರೂ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ. ಸೆಹ್ವಾಗ್ ಹಲವು ಬಾರಿ ಫಾರ್ಮ್ ಸಮಸ್ಯೆ ಎದುರಿಸಿದ್ದಾಗಲೆಲ್ಲ ನಾಯಕ ಸೌರವ್ ಗಂಗೂಲಿ ಹೆಚ್ಚಿನ ಅವಕಾಶವನ್ನು ಡೆಲ್ಲಿ ಆಟಗಾರನಿಗೆ ನೀಡುವ ಮೂಲಕ ಟೀಂ ಇಂಡಿಯಾದಲ್ಲಿ ದಶಕಗಳ ಕಾಲ ಮಿಂಚಲು ನೆರವಾಗಿದ್ದರು.
ಇದೀಗ ಖ್ಯಾತ ಹಿಂದಿ ಶೋ ಕೌನ್ ಬನೇಗಾ ಕರೋಡ್‌ಪತಿ 13ನೇ ಆವೃತ್ತಿಯಲ್ಲಿ ಸೌರವ್ ಗಂಗೂಲಿ ಹಾಗೂ ವಿರೇಂದ್ರ ಸೆಹ್ವಾಗ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದರ ಒಂದು ಪ್ರೋಮೋ ಬಿಡುಗಡೆಯಾಗಿದ್ದು, ಸಾಕಷ್ಟು ಹಾಸ್ಯಮಯ ಕ್ಷಣಗಳಿಗೆ ಸಾಕ್ಷಿಯಾಗಿದೆ.
ಬ್ಯಾಟಿಂಗ್ ಮಾಡುತ್ತಿದ್ದಾಗಲೂ ನೀವು ಹಾಡು ಗುನುಗುತ್ತಿದ್ರಾ ಎಂದು ಬಚ್ಚನ್ ಸೆಹ್ವಾಗ್ ಅವರನ್ನು ಕೇಳಿದ್ದಾರೆ, ಆಗ ಖ್ಯಾತ ನಟ ಕಿಶೋರ್ ಕುಮಾರ್ ಅಭಿನಯದ ಹಿಂದಿ ಹಾಡೊಂದನ್ನು ಮೆಲುಕು ಹಾಕಿದ್ದಾರೆ.
ಇದಾದ ಬಳಿಕ ಟೀಂ ಇಂಡಿಯಾ ಮಾಜಿ ಕೋಚ್ ಗ್ರೇಗ್ ಚಾಪೆಲ್‌ಗೆ ಯಾವುದಾದರೊಂದು ಹಾಡನ್ನು ಡೆಡಿಕೇಟ್ ಮಾಡೋದಾದ್ರೆ ಯಾವ ಹಾಡನ್ನು ಡೆಡಿಕೇಟ್ ಮಾಡುತ್ತೀರಾ ಎನ್ನುವ ಪ್ರಶ್ನೆಗೆ, ಪಕ್ಕದಲ್ಲಿ ಕುಳಿತಿದ್ದ ಗಂಗೂಲಿ ಮುಖ ನೋಡಿ ಮುಗುಳು ನಗುತ್ತಾ, ಅಪನಿ ತೋ ಜೈಸೆ ತೈಸೆ ಫಟ್ ಜಾಯೆಗಿ, ಆಪಕಾ ಕ್ಯಾ ಹೋಗಾ ಜನಾಬ್ ಏ ಆಲಿ ಎಂದು ಹಾಡು ಹೇಳಿ ನಗೆ ಬೀರಿದ್ದಾರೆ.
ಸೆಹ್ವಾಗ್ ಈ ಹಾಡು ಹಾಡುತ್ತಿದ್ದಂತೆಯೇ ಸೌರವ್ ಗಂಗೂಲಿ ಹಾಗೂ ಅಮಿತಾಬ್ ಬಚ್ಚನ್ ಕೂಡಾ ಹೊಟ್ಟೆ ಹುಣ್ಣಾಗುವಂತೆ ನಕ್ಕು ಹಗುರಾಗಿದ್ದಾರೆ. ಗ್ರೇಗ್ ಚಾಪೆಲ್ ಹಾಗೂ ಸೌರವ್ ಗಂಗೂಲಿ ಸಂಬಂಧ ಅಷ್ಟಕಷ್ಟೇ ಎನ್ನುವಂತಾಗಿತ್ತು. ಚಾಪೆಲ್ ಅವರಿಂದಲೇ ಗಂಗೂಲಿ ಕ್ರಿಕೆಟ್ ಬದುಕು ಸ್ವಲ್ಪ ಮುಂಚಿತವಾಗಿಯೇ ಮಸುಕಾಯಿತು ಎನ್ನುವ ಮಾತೂ ಇದೆ.
ಇನ್ನು ಒಂದು ವೇಳೆ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ವಿರುದ್ದ ಟೀಂ ಇಂಡಿಯಾ ಗೆಲುವು ಸಾಧಿಸಿದಾಗ ಯಾವ ಎರಡು ಸಾಲನ್ನು ಹೇಳಲು ಬಯಸುತ್ತೀರಾ ಎನ್ನುವ ಪ್ರಶ್ನೆಗೆ ಸೆಹ್ವಾಗ್ ಬಿಗ್ ಬಿ ಯ ಖ್ಯಾತ ಸಿನಿಮಾ ಶೆಹ್‌ನ್‌ಶಾದ ಖ್ಯಾತ ಡೈಲಾಗ್ ಹೊಡೆದಿದ್ದಾರೆ. ಅಂದಹಾಗೆ ಈ ಎಪಿಸೋಡ್ ಸೆಪ್ಟೆಂಬರ್ 03ರಂದು ನೀವೆಲ್ಲರೂ ಕಣ್ತುಂಬಿಕೊಳ್ಳಬಹುದಾಗಿದೆ.