2012ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ 2021ರ ಐಪಿಎಲ್ ಬಳಿಕ ಆರ್‌ಸಿಬಿ ತಂಡದ ನಾಯಕತ್ವಕ್ಕೆ ಗುಡ್ ಬೈ ಹೇಳುವುದಾಗಿ ಘೋಷಿಸಿದ್ದಾರೆ. ಭಾನುವಾರ(ಸೆ.19) ರಾತ್ರಿ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ಮುಂಬರುವ ಐಸಿಸಿ ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಟಿ20 ನಾಯಕತ್ವದಿಂದಲೂ ಕೆಳಗಿಳಿಯವುದಾಗಿ ಮೂರು ದಿನಗಳ ಹಿಂದಷ್ಟೇ ವಿರಾಟ್ ಕೊಹ್ಲಿ ಘೋಷಿಸಿದ್ದರು.
ವಿರಾಟ್ ಕೊಹ್ಲಿ ನಾಯಕತ್ವ ತೊರೆಯುವುದಾಗಿ ಘೋಷಿಸಿದ ಬೆನ್ನಲ್ಲೇ ಆರ್‌ಸಿಬಿ ಹೊಸ ನಾಯಕನ ಹುಡುಕಾಟ ಆರಂಭಿಸಲಿದೆ. ಆರ್‌ಸಿಬಿ ತಂಡದಲ್ಲಿರುವವರೆ ಕೆಲವರು ತಂಡವನ್ನು ಮುನ್ನಡೆಸುವ ಸಾಧ್ಯೆತೆಯಿದೆ. ಇಲ್ಲವೇ ಮುಂಬರುವ ಐಪಿಎಲ್ ಆಟಗಾರರ ಹರಾಜಿನಲ್ಲಿ ಆರ್‌ಸಿಬಿ ಉತ್ತಮ ನಾಯಕನನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವ ಸಾಧ್ಯತೆಯಿದೆ.
1. ಎಬಿ ಡಿ ವಿಲಿಯರ್ಸ್
ವಿರಾಟ್ ಕೊಹ್ಲಿ ನಾಯಕತ್ವ ತುಂಬಬಲ್ಲ ಇನ್ನೊಬ್ಬ ಆಟಗಾರ ಯಾರು ಎಂದರೆ ಥಟ್ಟನೆ ನೆನಪಾಗುವ ಹೆಸರು ದಕ್ಷಿಣ ಆಫ್ರಿಕಾದ ಸೂಪರ್ ಸ್ಟಾರ್ ಕ್ರಿಕೆಟಿಗ ಅಬ್ರಹಾಂ ಬೆಂಜಮಿನ್ ಡಿ ವಿಲಿಯರ್ಸ್. ಎಬಿಡಿ 2011ರಿಂದಲೂ ಆರ್‌ಸಿಬಿ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ನಾಯಕನಾಗಿ ಹರಿಣಗಳ ಪಡೆಯನ್ನು ಮುನ್ನಡೆಸಿರುವ ಅನುಭವ ಹೊಂದಿರುವ ಎಬಿಡಿ, ಬೆಂಗಳೂರು ಫ್ರಾಂಚೈಸಿಯ ಮೊದಲ ಆಯ್ಕೆಯಾದರೆ ಅಚ್ಚರಿಯಿಲ್ಲ.
2. ಗ್ಲೆನ್ ಮ್ಯಾಕ್ಸ್‌ವೆಲ್
ಆಸ್ಟ್ರೇಲಿಯಾದ ಅನುಭವಿ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಈಗಾಗಲೇ ಆರ್‌ಸಿಬಿ ಪರ ನಂಬಿಕಸ್ಥ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಉಪಯುಕ್ತ ಆಲ್ರೌಂಡ್ ಆಟದ ಮೂಲಕ ತಂಡದ ಆಸ್ತಿಯಾಗಬಲ್ಲ ಸಾಮರ್ಥ್ಯವಿರುವ ಮ್ಯಾಕ್ಸಿ ಆರ್‌ಸಿಬಿಯ ಮುಂದಿನ ಕೋಚ್ ಆಗುವ ಸಾಧ್ಯತೆಯಿದೆ.
3. ಡೇವಿಡ್ ವಾರ್ನರ್
ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್, ಕಳೆದ ಕೆಲವು ವರ್ಷಗಳ ಕಾಲ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. 2016ರಲ್ಲಿ ಡೇವಿಡ್ ವಾರ್ನರ್ ನೇತೃತ್ವದ ಸನ್‌ರೈಸರ್ಸ್ ತಂಡವು ಆರ್‌ಸಿಬಿ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಮುಂದಿನ ಆವೃತ್ತಿಯಲ್ಲಿ ಸನ್‌ರೈಸರ್ಸ್ ಫ್ರಾಂಚೈಸಿ ವಾರ್ನರ್ ಅವರನ್ನು ರೀಟೈನ್ ಮಾಡಿಕೊಳ್ಳುವುದು ಅನುಮಾನ ಎನಿಸಿದೆ. ಹೀಗಾಗಿ ಆರ್‌ಸಿಬಿ ಫ್ರಾಂಚೈಸಿ ವಾರ್ನರ್‌ಗೆ ಗಾಳ ಹಾಕುವ ಸಾಧ್ಯತೆಯಿದೆ
4. ದೇವದತ್ ಪಡಿಕ್ಕಲ್
21 ವರ್ಷದ ದೇವದತ್ ಪಡಿಕ್ಕಲ್ ಕಳೆದ ಎರಡು ಆವೃತ್ತಿಗಳಲ್ಲಿ ಮಿಂಚಿನ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದು, ಉತ್ತಮ ನಾಯಕತ್ವದ ಗುಣವನ್ನು ಹೊಂದಿದ್ದಾರೆ. ಬೆಂಗಳೂರು ಮೂಲದ ಪಡಿಕ್ಕಲ್‌ಗೆ ಫ್ರಾಂಚೈಸಿ ಪಟ್ಟಕಟ್ಟುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
5. ಆ್ಯರೋನ್ ಫಿಂಚ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕ್ರಿಕೆಟಿಗ ಹಾಗೂ ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ತಂಡದ ನಾಯಕ ಆ್ಯರೋನ್ ಫಿಂಚ್ ಕಳೆದ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದರು. ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ ಅಪಾರ ಅನುಭವ ಇರುವ ಫಿಂಚ್, ಕೊಹ್ಲಿ ಸ್ಥಾನವನ್ನು ತುಂಬುವ ಸಾಧ್ಯತೆಯಿದೆ.