IPL Retention: ಕನ್ನಡಿಗ ಕೆ. ಎಲ್ ರಾಹುಲ್‌ ಭಾರೀ ಆಫರ್ ಕೊಟ್ಟ ಲಖನೌ ಫ್ರಾಂಚೈಸಿ..?

First Published Nov 30, 2021, 3:31 PM IST

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನ (Indian Premier League) ಅತ್ಯಂತ ದುಬಾರಿ ಆಟಗಾರನಾಗಿ ಕನ್ನಡಿಗ ಕೆ.ಎಲ್‌.ರಾಹುಲ್‌ (KL Rahul) ಹೊರಹೊಮ್ಮುವ ಸಾಧ್ಯತೆ ದಟ್ಟವಾಗಿದೆ. ಟೂರ್ನಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಲಖನೌ (Lucknow) ತಂಡದ ಮಾಲಿಕರು ರಾಹುಲ್‌ಗೆ ಭಾರಿ ಮೊತ್ತದ ಆಫರ್‌ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 15ನೇ ಆವೃತ್ತಿಯ ಐಪಿಎಲ್‌ (IPL 2022) ಟೂರ್ನಿಗೂ ಮುನ್ನ ನಡೆಯಲಿರುವ ಮೆಗಾ ಹರಾಜಿಗೂ (IPL Mega Auction) ಮುನ್ನ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಮಂಗಳವಾರ(ನ.30) ಕಡೆಯ ದಿನವಾಗಿದೆ. ಇದರ ಬೆನ್ನಲ್ಲೇ ರಾಹುಲ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದಾರೆ.

7000 ಕೋಟಿ ರುಪಾಯಿಗೂ ಅಧಿಕ ಮೊತ್ತ ನೀಡಿ ಲಖನೌ ಐಪಿಎಲ್‌ ತಂಡ ಖರೀದಿಸಿದ್ದ ಉದ್ಯಮಿ ಸಂಜೀವ್‌ ಗೋಯೆಂಕಾ, ಇದೀಗ ಕನ್ನಡಿಗ ರಾಹುಲ್‌ಗೆ ದುಬಾಯಿ ಮೊತ್ತ ನೀಡಿ ತಮ್ಮ ತೆಕ್ಕೆಗೆ ಸೆಳೆಯುವ ಮೂಲಕ ಮತ್ತೊಂದು ದಾಖಲೆ ಬರೆಯಲು ಹೊರಟಿದ್ದಾರೆ ಎನ್ನಲಾಗಿದೆ.

केएल राहुल

ಕಳೆದ 2-3 ಆವೃತ್ತಿಗಳಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸಿದ್ದ ರಾಹುಲ್‌ರನ್ನು 2022ರ ಆವೃತ್ತಿಗೆ ಆ ತಂಡ ಉಳಿಸಿಕೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ತಂಡಗಳು ತಾವು ಉಳಿಸಿಕೊಳ್ಳಲು ಇಚ್ಛಿಸುವ ಆಟಗಾರರ ಪಟ್ಟಿಯನ್ನು ಸಲ್ಲಿಸಲು ನವೆಂಬರ್ 30 ಕೊನೆಯ ದಿನವಾಗಿದೆ.

(Photo Source- Google)

ರೀಟೈನ್‌ ಆದ ಆಟಗಾರರ ಪಟ್ಟಿ ಪ್ರಕಟಗೊಂಡ ಬಳಿಕ, ಹೊಸದಾಗಿ ಸೇರ್ಪಡೆಗೊಂಡಿರುವ ಲಖನೌ ಹಾಗೂ ಅಹಮದಾಬಾದ್‌ ತಂಡಗಳಿಗೆ ಹರಾಜಿಗೂ ಮೊದಲೇ ತಲಾ 3 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ನೀಡಿದೆ.

ಈ ವೇಳೆ ರಾಹುಲ್‌ಗೆ ಬರೋಬ್ಬರಿ 20 ಕೋಟಿ ರುಪಾಯಿ ನೀಡಿ ತಮ್ಮ ತಂಡಕ್ಕೆ ಸೇರಿಸಿಕೊಂಡು ನಾಯಕನ ಪಟ್ಟ ನೀಡಲು ಲಖನೌ ಮಾಲೀಕರು ಯೋಜನೆ ರೂಪಿಸಿದ್ದಾರೆ ಎಂದು ವರದಿಗಳಲ್ಲಿ ತಿಳಿಸಲಾಗಿದೆ. ಕೆ.ಎಲ್‌. ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿತ್ತು.

ರಾಹುಲ್‌ 2018ರ ಆಟಗಾರರ ಹರಾಜಿನಲ್ಲಿ 11 ಕೋಟಿ ರುಪಾಯಿಗೆ ಪಂಜಾಬ್‌ ಕಿಂಗ್ಸ್‌ ಪಾಲಾಗಿದ್ದರು. ಅವರನ್ನು ತಂಡದ ನಾಯಕನನ್ನಾಗಿ ನೇಮಿಸಲಾಗಿತ್ತು. ರಾಹುಲ್‌ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ತೋರಿದರೂ, ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸುವಲ್ಲಿ ಯಶಸ್ಸು ಕಾಣಲಿಲ್ಲ.

ಈವರೆಗೂ ಐಪಿಎಲ್‌ನಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಆಟಗಾರ ಎನ್ನುವ ದಾಖಲೆಯ ಆರ್‌ಸಿಬಿಯ ವಿರಾಟ್‌ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿಗೆ ಆರ್‌ಸಿಬಿ 17 ಕೋಟಿ ರುಪಾಯಿ ಪಾವತಿಸುತ್ತಿತ್ತು. ಆದರೆ ಕೊಹ್ಲಿ ಯಾವತ್ತೂ ಹರಾಜಿನಲ್ಲಿ ಪಾಲ್ಗೊಂಡಿಲ್ಲ. ಇದೀಗ ಕೊಹ್ಲಿ ದಾಖಲೆ ಧೂಳೀಪಟವಾಗುವ ಸಾಧ್ಯತೆಯಿದೆ. 
 

ಇನ್ನು 2021ರ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್‌, ದಕ್ಷಿಣ ಆಫ್ರಿಕಾದ ಆಲ್ರೌಂಡರ್‌ ಕ್ರಿಸ್‌ ಮೋರಿಸ್‌ರನ್ನು 16.25 ಕೋಟಿ ರು. ನೀಡಿ ಖರೀದಿಸಿತ್ತು. ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಕರಿಯಾದ ಆಟಗಾರ ಎನ್ನುವ ದಾಖಲೆ ಅವರ ಹೆಸರಿನಲ್ಲಿದೆ.

click me!