IPL Auction 2023: ಹಲವು ಅಚ್ಚರಿಗಳಿಗೆ ಸಾಕ್ಷಿಯಾದ ಮಿನಿ ಹರಾಜು..!

First Published Dec 24, 2022, 3:50 PM IST

ಕೊಚ್ಚಿ(ಡಿ.24): ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರ ಎನ್ನುವ ಹೆಗ್ಗಳಿಕೆಗೆ ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್‌ ಕರ್ರನ್ ಪಾತ್ರರಾಗಿದ್ದಾರೆ. ಶುಕ್ರವಾರ ನಡೆದ ಮಿನಿ ಹರಾಜಿನಲ್ಲಿ ಸ್ಯಾಮ್ ಕರ್ರನ್ ಅವರಿಗೆ 18.50 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಯಶಸ್ವಿಯಾಗಿದೆ. 

ಐಪಿಎಲ್ ಮಿನಿ ಹರಾಜಿಗೆ ಒಟ್ಟು 405 ಆಟಗಾರರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಈ ಪೈಕಿ 80 ಆಟಗಾರರು ಹರಾಜಾದರು. 80 ಆಟಗಾರರ ಪೈಕಿ 51 ಆಟಗಾರರು ಭಾರತೀಯರಾದರೇ, 29 ಆಟಗಾರರು ವಿದೇಶಿ ಆಟಗಾರರಿದ್ದರು. ಈ ಹರಾಜಿನಲ್ಲಿ ಕೆಲವು ಅಚ್ಚರಿಯ ಘಟನೆಗಳು ನಡೆದಿವೆ. ಇದರ ಒಂದು ಝಲಕ್ ಇಲ್ಲಿದೆ ನೋಡಿ.
 

ಕರ್ನಾಟಕದ ಕೇವಲ 4 ಆಟಗಾರರು ಸೇಲ್‌!

ಹರಾಜಿಗೆ ಕರ್ನಾಟಕ 16 ಆಟಗಾರರು ನೋಂದಣಿ ಮಾಡಿಕೊಂಡಿದ್ದರು. ಆದರೆ ಕೇವಲ ನಾಲ್ವರು ಬಿಕರಿಯಾಗಿದ್ದಾರೆ. ಮಯಾಂಕ್‌ ಅಗರ್‌ವಾಲ್‌ ಸನ್‌ರೈಸರ್ಸ್‌ ಪಾಲಾದರೆ, ಮನೀಶ್‌ ಪಾಂಡೆ 2.4 ಕೋಟಿ ರು.ಗೆ ಡೆಲ್ಲಿ ಕ್ಯಾಪಿಟಲ್ಸ್‌ ಸೇರಿದರು. ವೇಗಿ ವಿದ್ವತ್‌ ಕಾವೇರಪ್ಪ 20 ಲಕ್ಷ ರು.ಗೆ ಪಂಜಾಬ್‌ ಕಿಂಗ್‌್ಸ, ಆಲ್ರೌಂಡರ್‌ ಮನೋಜ್‌ ಭಾಂಡ್ಗೆ 20 ಲಕ್ಷ ರು.ಗೆ ಆರ್‌ಸಿಬಿ ಪಾಲಾದರು. ಕೆ.ಎಲ್‌.ರಾಹುಲ್‌, ದೇವದತ್‌ ಪಡಿಕ್ಕಲ್‌, ಕೆ.ಸಿ.ಕರಿಯಪ್ಪ, ಪ್ರಸಿದ್‌್ಧ ಕೃಷ್ಣ, ಕೆ.ಗೌತಮ್‌, ಅಭಿನವ್‌ ಮನೋಹರ್‌ ಹರಾಜಿಗೂ ಮೊದಲೇ ರೀಟೈನ್‌ ಆಗಿದ್ದರು.
 

ಮೊದಲ ಬಾರಿಗೆ ಐಪಿಎಲ್‌ಗೆ ರೂಟ್‌!

ಇಂಗ್ಲೆಂಡ್‌ನ ಮಾಜಿ ನಾಯಕ ಜೋ ರೂಟ್‌ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊದಲ ಸುತ್ತಿನಲ್ಲಿ ಬಿಕರಿಯಾಗದೆ ಉಳಿದಿದ್ದ ರೂಟ್‌ರನ್ನು ರಾಜಸ್ಥಾನ ರಾಯಲ್ಸ್‌ 1 ಕೋಟಿ ರು.ಗೆ ಖರೀದಿಸಿತು. ರೂಟ್‌ ಈ ಹಿಂದಿನ ಆವೃತ್ತಿಗಳಲ್ಲಿ ಐಪಿಎಲ್‌ ಹರಾಜಿಗೆ ನೋಂದಾಯಿಸಲು ನಿರಾಕರಿಸಿದ್ದರು. 2021ರ ಹರಾಜಿನಲ್ಲಿ 1.5 ಕೋಟಿ ರು. ಮೂಲಬೆಲೆ ಹೊಂದಿದ್ದ ರೂಟ್‌ ಬಿಕರಿಯಾಗದೆ ಉಳಿದಿದ್ದರು.
 

ತಮ್ಮನಿಗೆ ದಾಖಲೆ ಮೊತ್ತ, ಬಿಕರಿಯಾಗದೆ ಉಳಿದ ಅಣ್ಣ!

ಸ್ಯಾಮ್‌ ಕರ್ರನ್‌ ದಾಖಲೆ ಮೊತ್ತಕ್ಕೆ ಬಕರಿಯಾದರೆ ಅವರ ಹಿರಿಯ ಸಹೋದರ, ಇಂಗ್ಲೆಂಡ್‌ ವೇಗಿ ಟಾಮ್‌ ಕರ್ರನ್‌ ಬಿಕರಿಯಾಗದೆ ಉಳಿದರು. 2018, 2020ರಲ್ಲಿ ರಾಜಸ್ಥಾನ ಪರ ಆಡಿದ್ದ ಟಾಮ್‌, 2021ರಲ್ಲಿ 5.25 ಕೋಟಿ ರು.ಗೆ ಡೆಲ್ಲಿ ತಂಡ ಸೇರಿದ್ದರು. ಗಾಯದ ಕಾರಣ 2022ರ ಆವೃತ್ತಿಯಲ್ಲಿ ಆಡಿರಲಿಲ್ಲ.
 

ಕಳೆದ ವರ್ಷ .14 ಕೋಟಿ, ಈ ವರ್ಷ ಬರೀ .2 ಕೋಟಿ!

ಕೇನ್‌ ವಿಲಿಯಮ್ಸನ್‌ರನ್ನು 2022ರ ಮೆಗಾ ಹರಾಜಿಗೂ ಮುನ್ನ ಸನ್‌ರೈಸ​ರ್‍ಸ್ ಬರೋಬ್ಬರಿ 14 ಕೋಟಿ ರು. ನೀಡಿ ಉಳಿಸಿಕೊಂಡಿತ್ತು. ನಾಯಕತ್ವ, ವೈಯಕ್ತಿಕ ಪ್ರದರ್ಶನ ಎರಡರಲ್ಲೂ ಕೇನ್‌ ನಿರಾಸೆ ಮೂಡಿಸಿದ ಕಾರಣ ಅವರನ್ನು ಸನ್‌ರೈಸ​ರ್‍ಸ್ ಕೈಬಿಟ್ಟಿತ್ತು. ಶುಕ್ರವಾರ ಹರಾಜಿನಲ್ಲಿ ಅವರು ಮೂಲಬೆಲೆ 2 ಕೋಟಿ ರು.ಗೆ ಗುಜರಾತ್‌ ಪಾಲಾದರು.
 

ದಾಖಲೆ ವೀರ ಜಗದೀಶನ್‌ 90 ಲಕ್ಷಕ್ಕೆ ಕೆಕೆಆರ್‌ ಪಾಲು!

ಇತ್ತೀಚೆಗೆ ಮುಕ್ತಾಯಗೊಂಡ ವಿಜಯ್‌ ಹಜಾರೆ ಟೂರ್ನಿಯಲ್ಲಿ 277 ರನ್‌ಗಳ ಇನ್ನಿಂಗ್‌್ಸ ಒಳಗೊಂಡಂತೆ ಸತತ 5 ಶತಕ ಸಿಡಿಸಿ ದಾಖಲೆ ಬರೆದಿದ್ದ ತಮಿಳುನಾಡಿನ ಸ್ಫೋಟಕ ವಿಕೆಟ್‌ ಕೀಪರ್‌ ಬ್ಯಾಟರ್‌ ನಾರಾಯಣ ಜಗದೀಶನ್‌ಗೆ ಹರಾಜಿನಲ್ಲಿ ನಿರಾಸೆ ಉಂಟಾಯಿತು. ದೊಡ್ಡ ಮೊತ್ತದ ನಿರೀಕ್ಷೆಯಲ್ಲಿದ್ದ ಜಗದೀಶನ್‌ ಕೇವಲ 90 ಲಕ್ಷ ರು.ಗೆ ಕೆಕೆಆರ್‌ ತಂಡ ಸೇರಿದರು.
 

click me!