IPL Auction 2022: ಆಟಗಾರರ ಹರಾಜಿಗೂ ಮುನ್ನ ಮೂವರು ಆಟಗಾರರನ್ನು ಆಯ್ದುಕೊಂಡ ಲಖನೌ ಫ್ರಾಂಚೈಸಿ..!

First Published Jan 18, 2022, 5:25 PM IST

ಬೆಂಗಳೂರು: 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಫೆಬ್ರವರಿಯಲ್ಲಿ ನಡೆಯಲಿರುವ ಹರಾಜಿಗೂ ಮುನ್ನ ಹೊಸ ಎರಡು ಫ್ರಾಂಚೈಸಿಗಳಿಗೆ ಗರಿಷ್ಠ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಬಿಸಿಸಿಐ (BCCI) ಅವಕಾಶ ನೀಡಿತ್ತು. ಅದರಂತೆ ಇದೀಗ ಡಾ. ಆರ್‌.ಪಿ. ಸಂಜೀವ್ ಗೋಯೆಂಕಾ ಒಡೆತನದ ಲಖನೌ ಫ್ರಾಂಚೈಸಿಯು (Lucknow Franchise) ಮೂರು ಆಟಗಾರರನ್ನು ಮೆಗಾ ಹರಾಜಿಗೂ (IPL Mega Auction) ಮುನ್ನ ಆಯ್ಕೆ ಮಾಡಿಕೊಂಡಿದೆ ಎಂದು ಖ್ಯಾತ ಕ್ರಿಕೆಟ್‌ ವೆಬ್‌ಸೈಟ್ ESPNCricinfo ವರದಿ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

15ನೇ ಆವೃತ್ತಿಯ ಐಪಿಎಲ್‌ ಮೆಗಾ ಹರಾಜಿಗೆ ಈಗಾಗಲೇ ಭರದ ಸಿದ್ದತೆಗಳು ಆರಂಭವಾಗಿವೆ. ಫೆಬ್ರವರಿ 12 ಹಾಗೂ 13ರಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಐಪಿಎಲ್‌ ಆಟಗಾರರ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ ಎಲ್ಲಾ 10 ಫ್ರಾಂಚೈಸಿಗಳು ಪಾಲ್ಗೊಳ್ಳಲಿವೆ.

ಈಗಿರುವ ಹಳೆಯ 8 ಫ್ರಾಂಚೈಸಿಗಳಿಗೆ ಗರಿಷ್ಠ ನಾಲ್ಕು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ನೀಡಿತ್ತು. ಇನ್ನು ಐಪಿಎಲ್‌ ಟೂರ್ನಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಅಹಮದಾಬಾದ್ ಹಾಗೂ ಲಖನೌ ಫ್ರಾಂಚೈಸಿಗಳಿಗೆ ಮೆಗಾ ಹರಾಜಿಗೂ ಮುನ್ನ ಗರಿಷ್ಠ ಮೂವರು ಆಟಗಾರರನ್ನು ಆಯ್ದುಕೊಳ್ಳಲು ಬಿಸಿಸಿಐ ಅವಕಾಶ ನೀಡಿತ್ತು.

ಅದರಂತೆ ಲಖನೌ ಫ್ರಾಂಚೈಸಿಯು ತನಗೆ ಬೇಕಾದ ಮೂವರು ಆಟಗಾರರನ್ನು ಆಯ್ದುಕೊಂಡಿದೆ. ನಿರೀಕ್ಷೆಯಂತೆಯೇ ಕನ್ನಡಿಗ ಕೆ.ಎಲ್‌. ರಾಹುಲ್, ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕಸ್‌ ಸ್ಟೋಯ್ನಿಸ್‌ ಹಾಗೂ ಪ್ರತಿಭಾನ್ವಿತ ಲೆಗ್‌ ಸ್ಪಿನ್ನರ್ ರವಿ ಬಿಷ್ಣೋಯಿ ಅವರನ್ನು ಲಖನೌ ಫ್ರಾಂಚೈಸಿಯು ಆಯ್ದುಕೊಂಡಿದೆ ಎಂದು ESPNCricinfo ವೆಬ್‌ಸೈಟ್ ವರದಿ ಮಾಡಿದೆ.
 

ಕೆ.ಎಲ್. ರಾಹುಲ್ ಸದ್ಯ ಐಪಿಎಲ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. 2021ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಕೆ.ಎಲ್. ರಾಹುಲ್‌ 13 ಪಂದ್ಯಗಳನ್ನಾಡಿ 62.50 ಬ್ಯಾಟಿಂಗ್ ಸರಾಸರಿಯಲ್ಲಿ 626 ರನ್‌ ಬಾರಿಸಿ ಅಬ್ಬರಿಸಿದ್ದರು. ಇದರಲ್ಲಿ ಆರು ಅರ್ಧಶತಕಗಳು ಸೇರಿದ್ದವು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂಲಕ ತಮ್ಮ ಐಪಿಎಲ್‌ ವೃತ್ತಿಜೀವನ ಆರಂಭಿಸಿದ ಕೆ.ಎಲ್. ರಾಹುಲ್, ಇದುವರೆಗೂ ಒಟ್ಟು 94 ಪಂದ್ಯಗಳನ್ನಾಡಿ 47.4ರ ಬ್ಯಾಟಿಂಗ್ ಸರಾಸರಿಯಲ್ಲಿ 27 ಅರ್ಧಶತಕ ಸಹಿತ 3,273 ರನ್‌ ಬಾರಿಸಿದ್ದಾರೆ. 

ESPNCricinfo ವೆಬ್‌ಸೈಟ್ ವರದಿ ಪ್ರಕಾರ, ಈ ಮೂವರು ಆಟಗಾರರನ್ನು ಖರೀದಿಸಲು ಲಖನೌ ಫ್ರಾಂಚೈಸಿಯು ಒಟ್ಟು 30 ಕೋಟಿ ರುಪಾಯಿ ಖರ್ಚು ಮಾಡಿದೆ. ಕೆ.ಎಲ್‌ ರಾಹುಲ್‌ಗೆ 15 ಕೋಟಿ, ಮಾರ್ಕಸ್ ಸ್ಟೋಯ್ನಿಸ್‌ಗೆ 11 ಕೋಟಿ ಹಾಗೂ ಅಂತಾರಾಷ್ಟ್ರೀಯ ಪಂದ್ಯವನ್ನಾಡದ ಆಟಗಾರ ರವಿ ಬಿಷ್ಣೋಯಿಗೆ 4 ಕೋಟಿ ರುಪಾಯಿ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಕೆ.ಎಲ್‌. ರಾಹುಲ್‌ ಲಖನೌ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ ಎನ್ನಲಾಗಿದೆ.

ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ರವಿ ಬಿಷ್ಣೋಯಿ 2021ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ 12 ಪಂದ್ಯಗಳನ್ನಾಡಿ ಕೇವಲ 6.34ರ ಎಕಾನಮಿಯಲ್ಲಿ ರನ್‌ ನೀಡಿ 9 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಇನ್ನು ಒಟ್ಟಾರೆ 23 ಐಪಿಎಲ್‌ ಪಂದ್ಯಗಳನ್ನಾಡಿ ಕೇವಲ 6.96ರ ಸರಾಸರಿಯಲ್ಲಿ ರನ್ ನೀಡಿ 24 ವಿಕೆಟ್ ಕಬಳಿಸಿದ್ದಾರೆ. 

ಇನ್ನು ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕಸ್‌ ಸ್ಟೋಯ್ನಿಸ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಏಕಾಂಗಿಯಾಗಿ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ರಾಯಲ್‌ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಸೇರಿದಂತೆ ಸ್ಟೋಯ್ನಿಸ್‌ ಈ ವರೆಗೆ ನಾಲ್ಕು ಐಪಿಎಲ್‌ ಫ್ರಾಂಚೈಸಿ ಪರ ಕಣಕ್ಕಿಳಿದಿದ್ದು, ಲಖನೌ ತಂಡವು ಸ್ಟೋಯ್ನಿಸ್ ಪಾಲಿಗೆ ಐದನೇ ಐಪಿಎಲ್ ತಂಡವಾಗಲಿದೆ.

ಈ ಮೊದಲು ಅಹಮದಾಬಾದ್ ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯ(15 ಕೋಟಿ ರುಪಾಯಿ), ರಶೀದ್ ಖಾನ್(15 ಕೋಟಿ ರುಪಾಯಿ) ಹಾಗೂ ಶುಭ್‌ಮನ್‌ ಗಿಲ್‌(7 ಕೋಟಿ ರುಪಾಯಿ) ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಹಾರ್ದಿಕ್ ಪಾಂಡ್ಯ ಅಹಮದಾಬಾದ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವರದಿಯಾಗಿತ್ತು.
 

click me!