IPL Auction 2022: ಶ್ರೇಯಸ್ ಅಯ್ಯರ್ ಖರೀದಿಸಲು RCB ಸೇರಿ 3 ತಂಡಗಳ ನಡುವೆ ಫೈಟ್‌.!

First Published | Jan 17, 2022, 6:07 PM IST

ಬೆಂಗಳೂರು: ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ ಮೆಗಾ ಹರಾಜಿಗೆ (IPL Mega Auction) ಈಗಾಗಲೇ ಭರದ ಸಿದ್ದತೆಗಳು ಆರಂಭವಾಗಿವೆ. ಈಗಿರುವ 8 ತಂಡಗಳ ಜತೆಗೆ ಹೊಸದಾಗಿ ಎರಡು ತಂಡಗಳು ಸೇರ್ಪಡೆಯಾಗಿರುವುದರಿಂದ ಫೆಬ್ರವರಿ ತಿಂಗಳಿನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡದಿಂದ ಹೊರಬಂದಿರುವ ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಸೇರಿದಂತೆ ಈ ಮೂರು ಫ್ರಾಂಚೈಸಿಗಳು ಪೈಪೋಟಿ ನಡೆಸುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 2022ರ ಮೆಗಾ ಹರಾಜಿಗೂ ಮುನ್ನ ರಿಷಭ್ ಪಂತ್, ಪೃಥ್ವಿ ಶಾ, ಆನ್ರಿಚ್ ನೊಕಿಯ ಹಾಗೂ ಅಕ್ಷರ್ ಪಟೇಲ್ ಅವರನ್ನು ರೀಟೈನ್‌ ಮಾಡಿಕೊಂಡಿತ್ತು. ಇದೇ ವೇಳೆ ಮಾಜಿ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ರಿಲೀಸ್ ಮಾಡಿತ್ತು.

ಈ ಮೊದಲು ವರದಿಯಾದಂತೆ ಹೊಸ ತಂಡವಾದ ಅಹಮದಾಬಾದ್‌ ಫ್ರಾಂಚೈಸಿಯು ಶ್ರೇಯಸ್ ಅಯ್ಯರ್ ಅವರನ್ನು ಹರಾಜಿಗೂ ಮುನ್ನ ಆಯ್ದುಕೊಂಡು ಅವರಿಗೆ ನಾಯಕ ಪಟ್ಟ ನೀಡಲಿದೆ ಎಂದು ಹೇಳಲಾಗಿತ್ತು. ಆದರೀಗ ಲಖನೌ ಹಾಗೂ ಅಹಮದಾಬಾದ್ ಫ್ರಾಂಚೈಸಿಯು ಶ್ರೇಯಸ್ ಅಯ್ಯರ್‌ ಅವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಂಡು, ನಾಯಕತ್ವ ಪಟ್ಟ ನೀಡದಿರಲು ತೀರ್ಮಾನಿಸಿದೆ ಎನ್ನಲಾಗಿದೆ.

Tap to resize

ಶ್ರೇಯಸ್ ಅಯ್ಯರ್ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಉತ್ತಮವಾಗಿ ಮುನ್ನಡೆಸಿದ ಅನುಭವವಿದೆ. 2020ರ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್‌ಗೆ ಶರಣಾಗುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಇದೀಗ ಇಂಡಿಯಾ ಟುಡೆ ವೆಬ್‌ಸೈಟ್ ವರದಿಯ ಪ್ರಕಾರ, ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಮುಂಬರುವ ಐಪಿಎಲ್ ಮೆಗಾ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಖರೀದಿಸಿ, ನಾಯಕತ್ವ ಪಟ್ಟ ನೀಡಲು ರಣತಂತ್ರ ಹೆಣೆದಿದೆ ಎಂದು ವರದಿ ಮಾಡಿದೆ.

ಈಗಾಗಲೇ ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿದಿರುವ ಹಿನ್ನೆಲೆಯನ್ನು ಅನುಭವಿ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಬೆಂಗಳೂರು ಮೂಲದ ಫ್ರಾಂಚೈಸಿಯು ಶತಾಯಗತಾಯ ಪ್ರಯತ್ನಿಲಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
 

ಇನ್ನು ಇದೇ ವೇಳೆ ಚೊಚ್ಚಲ ಐಪಿಎಲ್‌ ಟ್ರೋಫಿಯ ಕನವರಿಕೆಯಲ್ಲಿರುವ ಪಂಜಾಬ್ ಕಿಂಗ್ಸ್ ಹಾಗೂ ಎರಡು ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್‌ ರೈಡರ್ಸ್ ಫ್ರಾಂಚೈಸಿಯು ಕೂಡಾ ಶ್ರೇಯಸ್ ಅಯ್ಯರ್ ಅವರನ್ನು ಖರೀದಿಸಿ ನಾಯಕತ್ವ ಪಟ್ಟ ನೀಡಲು ಒಲವು ತೋರಿದೆ ಎಂದು ವರದಿಯಾಗಿದೆ.
 

ಕಳೆದೆರಡು ಆವೃತ್ತಿಗಳಲ್ಲಿ ಪಂಜಾಬ್ ಕಿಂಗ್ಸ್‌ ತಂಡದ ನಾಯಕರಾಗಿದ್ದ ಕೆ.ಎಲ್. ರಾಹುಲ್ ಇದೀಗ ತಂಡವನ್ನು ತೊರೆದಿದ್ದಾರೆ. ಇನ್ನು ಕೆಕೆಆರ್ ತಂಡವನ್ನು ಫೈನಲ್‌ಗೇರಿಸಿದ್ದ ಇಯಾನ್ ಮಾರ್ಗನ್ ಅವರನ್ನು ಫ್ರಾಂಚೈಸಿಯು ತಂಡದಿಂದ ಕೈಬಿಟ್ಟಿದೆ. ಹೀಗಾಗಿ ಶ್ರೇಯಸ್ ಅಯ್ಯರ್ ಮೇಲೆ ಈ ಎರಡು ಫ್ರಾಂಚೈಸಿಗಳು ಕಣ್ಣಿಟ್ಟಿವೆ.

ಮುಂಬೈ ಮೂಲದ ಬಲಗೈ ಬ್ಯಾಟರ್‌ ಶ್ರೇಯಸ್ ಅಯ್ಯರ್ ಇದುವರೆಗೂ 87 ಐಪಿಎಲ್ ಇನಿಂಗ್ಸ್‌ಗಳನ್ನಾಡಿ 16 ಅರ್ಧಶತಕ ಸಹಿತ 2,375 ರನ್ ಬಾರಿಸಿದ್ದಾರೆ. ಇನ್ನು 2020ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 519 ರನ್‌ ಸಿಡಿಸಿ ಗಮನ ಸೆಳೆದಿದ್ದರು.

Latest Videos

click me!