ಮೆಗಾ ಹರಾಜಿಗೂ ಮುನ್ನ ಐಪಿಎಲ್ 2025ರ ರೀಟೈನ್ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡುವ ದಿನಾಂಕ ಹತ್ತಿರವಾಗುತ್ತಿದೆ. ಪ್ರತಿಯೊಂದು ತಂಡವು ಯಾರನ್ನು ಉಳಿಸಿಕೊಳ್ಳಬೇಕು ಮತ್ತು ಯಾರನ್ನು ರಿಲೀಸ್ ಮಾಡಬೇಕು ಎಂಬುದರ ಬಗ್ಗೆ ರಣತಂತ್ರ ಹೆಣೆಯುತ್ತಿವೆ. ಕಳೆದ ವರ್ಷದ ಫೈನಲ್‌ನಲ್ಲಿ ಸೋತ ಸನ್‌ರೈಸರ್ಸ್ ಹೈದರಾಬಾದ್ ಈ ಬಾರಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಈಗಾಗಲೇ 3 ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಅವರ ಬಗ್ಗೆ ನಾವು ಈಗ ನೋಡೋಣ. ಸನ್‌ರೈಸರ್ಸ್ ಹೈದರಾಬಾದ್‌ನಲ್ಲಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯಲ್ಲಿ ಮೊದಲಿಗರು ಹೆನ್ರಿಚ್ ಕ್ಲಾಸೆನ್.
ಹೆನ್ರಿಚ್ ಕ್ಲಾಸೆನ್ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಆರೆಂಜ್ ಆರ್ಮಿಗೆ ಏಕಾಂಗಿಯಾಗಿ ಹಲವು ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದರು. ಹೀಗಾಗಿ ಕ್ಲಾಸೆನ್, ಸನ್‌ರೈಸರ್ಸ್ ತಂಡದ ಮೊದಲ ಆಯ್ಕೆಯ ರೀಟೈನ್ ಆಗುವ ಸಾಧ್ಯತೆಯಿದೆ.
ಇದರ ಜೊತೆಗೆ ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಉಳಿಸಿಕೊಳ್ಳಲು ಸನ್‌ರೈಸರ್ಸ್ ಫ್ರಾಂಚೈಸಿ ಒಲವು ತೋರಿದೆ. ಯಾಕೆಂದರೆ ಕಳೆದ ಐಪಿಎಲ್ ಋತುವಿನಲ್ಲಿ ತಂಡವನ್ನು ಯಶಸ್ವಿಯಾಗಿ ಫೈನಲ್‌ವರೆಗೆ ಮುನ್ನಡೆಸಿದ ಪ್ಯಾಟ್ ಕಮಿನ್ಸ್ ಅವರನ್ನು ಐಪಿಎಲ್ ಹರಾಜಿನಲ್ಲಿ ಬರೋಬ್ಬರಿ 20.75 ಕೋಟಿ ರೂ.ಗೆ ಖರೀದಿಸಲಾಗಿತ್ತು.
ಹೈದರಾಬಾದ್ ತಂಡದ ಮತ್ತೊಬ್ಬ ಸ್ಫೋಟಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಅವರನ್ನು ಎಷ್ಟು ಕೋಟಿಗೆ ಉಳಿಸಿಕೊಳ್ಳಬೇಕು ಎಂಬ ಗೊಂದಲದಲ್ಲಿ ತಂಡದ ಆಡಳಿತ ಮಂಡಳಿ ಇದೆ. ಅದೇ ರೀತಿ ಮತ್ತೊಬ್ಬ ಆಟಗಾರ ನಿತೀಶ್ ಕುಮಾರ್ ರೆಡ್ಡಿಗೆ ಎಷ್ಟು ಹಣ ನೀಡಬೇಕು ಎಂಬ ಚರ್ಚೆಯಲ್ಲಿದೆ.
2024 ರ ನಂತರ 2025 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಉತ್ತಮ ಐಪಿಎಲ್ ತಂಡವಾಗಿ ಹೊರಹೊಮ್ಮಲಿದೆ ಎಂದು ನಿರೀಕ್ಷಿಸಲಾಗಿದೆ. ಇದಕ್ಕಾಗಿಯೇ ತಂಡದ ಆಡಳಿತ ಮಂಡಳಿಯು ಬಲಿಷ್ಠ ಆಟಗಾರರನ್ನು ಹರಾಜಿನಲ್ಲಿ ಖರೀದಿಸಲು ಈಗಿನಿಂದಲೇ ರಣತಂತ್ರ ಹೆಣೆಯುತ್ತಿದ್ದಾರೆ.