ಐಪಿಎಲ್ 2024 ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಧೋನಿ ಐಪಿಎಲ್ ಟೂರ್ನಿಯಿಂದ ವಿದಾಯ ಘೋಷಿಸಿಲ್ಲ. ಆದರೆ ಫಿಟ್ನೆಸ್ ಸಮಸ್ಯೆ ಧೋನಿ ಆಟದ ಬಗ್ಗೆ ಅನುಮಾನ ಮೂಡಿಸಿದೆ.
ಎಂಎಸ್ ಧೋನಿ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಇನ್ನು ನಾಲ್ಕು ತಿಂಗಳಲ್ಲಿ ಚೇತರಿಸಿಕೊಂಡು ಅಖಾಡಕ್ಕಿಳಿಯುವುದು ಸವಾಲಿನ ಮಾತು. ಹೀಗಾಗಿ ಚೆನ್ನೈ ನಾಯಕತ್ವ ಜವ್ದಾರಿಯನ್ನು ಯುವ ಕ್ರಿಕೆಟಿಗನಿಗೆ ನೀಡಲು ಮುಂದಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್‌ಗೆ ನಾಯಕತ್ವ ನೀಡಲು ಸಿಎಸ್‌ಕೆ ಫ್ರಾಂಚೈಸಿ ಮುಂಜಾಗಿದೆ. 2024ರ ಐಪಿಎಲ್ ಟೂರ್ನಿಯಲ್ಲಿ ರುತುರಾಜ್ ಚೆನ್ನೈ ತಂಡ ಮುನ್ನಡೆಸುವ ಸಾಧ್ಯತೆ ಇದೆ.
ಧೋನಿ ಸಂಪೂರ್ಣ ಫಿಟ್ ಆಗಿ ಅಖಾಡಕ್ಕಿಳಿದರೂ ರುತುರಾಜ್ ಗಾಯಕ್ವಾಡ್ ತಂಡ ಮುನ್ನಡೆಸುವ ಸಾಧ್ಯತೆ ಇದೆ. ಧೋನಿ ಮೇಲಿನ ಹೊರೆ ಕಡಿಮೆ ಮಾಡಲು ಚೆನ್ನೈ ಫ್ರಾಂಚೈಸಿ ಮುಂದಾಗಿದೆ.
ಸ್ವತಃ ಧೋನಿಯೇ 2024ರ ಐಪಿಎಲ್ ಆಡುವ ಕುರಿತು ಫ್ರಾಂಚೈಸಿ ಜೊತೆ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಮುಂದಿನ ನಾಯಕತ್ವದ ಕುರಿತು ಚರ್ಚೆಸಿದ್ದಾರೆ.
2022ರಲ್ಲಿ ಧೋನಿ ತಮ್ಮ ನಾಯಕತ್ವವನ್ನು ರವೀಂದ್ರ ಜಡೇಜಾಗೆ ಬಿಟ್ಟುಕೊಟ್ಟಿದ್ದರು. ಆದರೆ ಜಡೇಜಾ ನಾಯತ್ವದಲ್ಲಿ ಸತತ ಸೋಲು ಕಂಡ ಚೆನ್ನೈ ಹೀನಾಯ ಪ್ರದರ್ಶನ ನೀಡಿತ್ತು. ಬಳಿಕ ಧೋನಿ ನಾಯಕತ್ವ ವಹಿಸಿಕೊಂಡರೂ ಪ್ಲೇ ಆಫ್ ಹಂತಕ್ಕೇರಲು ಸಾಧ್ಯವಾಗಲಿಲ್ಲ.
ಐಪಿಎಲ್ ಹರಾಜಿನಲ್ಲಿ ಕೆಲ ನಾಯಕತ್ವ ಜವಾಬ್ದಾರಿ ನಿರ್ವಹಿಸಬಲ್ಲ ಯುವ ಕ್ರಿಕೆಟಿಗರನ್ನು ಬಿಡ್ಡಿಂಗ್ ಮಾಡಲು ಚೆನ್ನೈ ಸೂಪರ್ ಕಿಂಗ್ಸ್ ನಿರ್ಧರಿಸಿದೆ. ಈ ಮೂಲಕ ಧೋನಿ ಉತ್ತರಾಧಿಕಾರಿ ನೇಮಕಕ್ಕೆ ತಯಾರಿ ಮಾಡುತ್ತಿದೆ.
ಧೋನಿ ನಾಯಕತ್ವದಲ್ಲಿ ಇದುವರೆಗೆ ಚೆನ್ನೈ ಸೂಪರ್ ಕಿಂಗ್ಸ್ ಸುಭದ್ರವಾಗಿತ್ತು. ಇದೀಗ ಅದೇ ವರ್ಚಸ್ಸು, ಅದೇ ಪ್ರದರ್ಶನ, ಟ್ರೋಫಿ ಗೆಲುವಿಗೆ ಹೊಸ ನಾಯಕನ ಅವಶ್ಯಕತೆ ಚೆನ್ನೈ ತಂಡಕ್ಕಿದೆ.