ಚೆನ್ನೈ ಸೂಪರ್ ಕಿಂಗ್ಸ್ ಎದುರು ಗೆದ್ರು ಆರ್‌ಸಿಬಿ ಪ್ಲೇ ಆಫ್‌ಗೇರೋದು ಡೌಟ್..! ಇಲ್ಲಿದೆ ಹೊಸ ಅಪ್ಡೇಟ್‌

First Published | May 17, 2024, 6:31 PM IST

ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಬಹುನಿರೀಕ್ಷಿತ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಮೇ 18ರಂದು ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ. ಈ ಪಂದ್ಯ ಉಭಯ ತಂಡಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ. ಈ ಪಂದ್ಯವನ್ನು ಆರ್‌ಸಿಬಿ ಜಯಿಸಿದರೂ ಪ್ಲೇ ಆಫ್‌ಗೇರೋದು ಅನುಮಾನ ಎನಿಸಿದೆ. ಈ ಕುರಿತಾದ ಅಪ್‌ಡೇಟ್ ಇಲ್ಲಿದೆ ನೋಡಿ. 
 

17ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಲೀಗ್ ಹಂತ ಅಂತಿಮ ಘಟ್ಟ ತಲುಪಿದೆ. ಈಗಾಗಲೇ ಕೋಲ್ಕತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ತಮ್ಮ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿವೆ.

ಇನ್ನುಳಿದ ಒಂದು ಸ್ಥಾನಕ್ಕಾಗಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಪೈಪೋಟಿ ನಡೆಸುತ್ತಿವೆ.

Latest Videos


ಈ ಪೈಕಿ ಕೆ ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್, ಔಪಚಾರಿಕವಾಗಿ ರೇಸ್‌ನಲ್ಲಿದೆಯಾದರೂ, ನಿಜವಾದ ಪೈಪೋಟಿ ಇರುವುದು ಚೆನ್ನೈ ಹಾಗೂ ಬೆಂಗಳೂರು ತಂಡಗಳ ನಡುವೆ. ಯಾಕೆಂದರೆ ಲಖನೌ ತಂಡದ ನೆಟ್‌ ರನ್‌ರೇಟ್ ನೆಗೆಟಿವ್ ಇದೆ.

ಹೀಗಾಗಿ ಇದೇ ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದ ಮೇಲೆ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು 14 ಅಂಕಗಳನ್ನು ಹೊಂದಿದ್ದು, ಆರ್‌ಸಿಬಿಗಿಂತ ನೆಟ್‌ ರನ್‌ರೇಟ್(+0.528) ಕೂಡಾ ಉತ್ತಮವಾಗಿದೆ.

ಇನ್ನೊಂದೆಡೆ ಆರಂಭಿಕ ವೈಪಲ್ಯಗಳನ್ನು ಮೆಟ್ಟಿನಿಂತು ಇದೀಗ ಸತತ 5 ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಆರ್‌ಸಿಬಿ ಬಳಿ 12 ಅಂಕಗಳಿವೆ. ಫಾಫ್ ಡು ಪ್ಲೆಸಿಸ್ ಪಡೆಯ ನೆಟ್‌ ರನ್‌ರೇಟ್ +0.387 ಆಗಿದೆ.

ಸದ್ಯ ಆರ್‌ಸಿಬಿ ತಂಡವು ಚೆನ್ನೈ ಸೂಪರ್ ಕಿಂಗ್ಸ್‌ಗಿಂತ ನೆಟ್‌ ರನ್‌ರೇಟ್‌ನಲ್ಲಿ ಹಿಂದಿದೆ. ಹೀಗಾಗಿ ಚೆನ್ನೈ ಎದುರು ಆರ್‌ಸಿಬಿ ಗೆಲುವು ಸಾಧಿಸಿದರೂ ಪ್ಲೇ ಆಫ್ ಹಾದಿ ಕನ್ಫರ್ಮ್ ಆಗಲ್ಲ. ಸಿಎಸ್‌ಕೆ ನೆಟ್‌ ರನ್‌ರೇಟ್ ಹಿಂದಿಕ್ಕಿದರೆ ಮಾತ್ರ ಆರ್‌ಸಿಬಿ ಪ್ಲೇ ಆಫ್‌ಗೇರಲಿದೆ.

ಹೌದು, ಆರ್‌ಸಿಬಿ ತಂಡವು ಸಿಎಸ್‌ಕೆ ವಿರುದ್ದ ಮೊದಲು ಬ್ಯಾಟ್ ಮಾಡಿದರೆ, ಬೆಂಗಳೂರು ತಂಡವು ಒಂದು ವೇಳೆ 200 ರನ್ ಗಳಿಸಿದರೆ ಕನಿಷ್ಠ 18 ರನ್ ಅಂತರದ ಗೆಲುವನ್ನು ಸಾಧಿಸಬೇಕು. ಒಂದು ವೇಳೆ ಆರ್‌ಸಿಬಿ 17 ರನ್ ಅಂತರದ ಗೆಲುವು ಸಾಧಿಸಿದರೂ, ಸಿಎಸ್‌ಕೆ ಪ್ಲೇ ಆಫ್‌ಗೇರಲಿದೆ. ಈ ಮೂಲಕ ಬೆಂಗಳೂರು ತಂಡದ ನಾಕೌಟ್ ಕನಸು ನುಚ್ಚುನೂರಾಗಲಿದೆ.

ಇನ್ನು ಒಂದು ವೇಳೆ ಆರ್‌ಸಿಬಿ ತಂಡವು ಚೇಸಿಂಗ್ ತೆಗೆದುಕೊಂಡರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡವು 201 ರನ್ ಗುರಿ ನೀಡಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 11 ಎಸೆತ ಬಾಕಿ ಇರುವಂತೆ ಅಂದರೆ 18.1 ಓವರ್‌ನಲ್ಲಿ ಗೆಲುವು ಸಾಧಿಸಿದರಷ್ಟೇ ಪ್ಲೇ ಆಫ್‌ಗೇರಲು ಸಾಧ್ಯವಾಗಲಿದೆ.

ಈಗಾಗಲೇ ಹಲವು ಸವಾಲುಗಳನ್ನು ಮೆಟ್ಟಿನಿಂತು ಮೈಕೊಡವಿಕೊಂಡು ಗೆಲುವಿನ ನಾಗಾಲೋಟ ಮುಂದುವರೆಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಲ್ಲಿ ಸಿಎಸ್‌ಕೆಯನ್ನು ನೆಟ್‌ ರನ್‌ರೇಟ್‌ನೊಂದಿಗೆ ಮಣಿಸಿ ಪ್ಲೇ ಆಫ್‌ಗೇರುತ್ತಾ ಎನ್ನುವುದನ್ನು ಕಮೆಂಟ್ ಮಾಡಿ ತಿಳಿಸಿ

click me!