2023ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ ಆಫ್‌ಗೇರಲು ವಿಫಲವಾಗಿತ್ತು. ಕಳೆದ 4 ಸೀಸನ್ ಐಪಿಎಲ್ ಪೈಕಿ ಮೊದಲ ಬಾರಿಗೆ ಬೆಂಗಳೂರು ತಂಡವು ಪ್ಲೇ ಆಫ್‌ಗೇರಲು ವಿಫಲವಾಗಿತ್ತು.
ಇದೀಗ ಆರ್‌ಸಿಬಿ ಮ್ಯಾನೇಜ್‌ಮೆಂಟ್ ನಿರೀಕ್ಷೆಯಂತೆಯೇ ತಂಡದಲ್ಲಿ ಮೇಜರ್ ಸರ್ಜರಿ ಮಾಡಿದ್ದು, ತಂಡದ ಕ್ರಿಕೆಟ್ ಡೈರೆಕ್ಟರ್ ಮೈಕ್ ಹೆಸನ್ ಹಾಗೂ ಹೆಡ್ ಕೋಚ್ ಸಂಜಯ್ ಬಂಗಾರ್‌ಗೆ ಗೇಟ್ ಪಾಸ್ ನೀಡಿದ್ದು, ಚಾಂಪಿಯನ್ ಕೋಚ್ ಜಿಂಬಾಬ್ವೆಯ ಆ್ಯಂಡಿ ಫ್ಲವರ್‌ಗೆ ಅವರನ್ನು ಆರ್‌ಸಿಬಿ ತಂಡದ ಹೆಡ್ ಕೋಚ್ ಆಗಿ ನೇಮಿಸಲಾಗಿದೆ.
ಕಳೆದ ಬಾರಿ ಆರ್‌ಸಿಬಿ ಪ್ಲೇ ಆಫ್‌ಗೇರದ ಹಿನ್ನೆಲೆಯಲ್ಲಿ ಮೈಕ್ ಹೆಸನ್ ಹಾಗೂ ಸಂಜಯ್ ಬಂಗಾರ್ ಅವರ ಒಪ್ಪಂದವನ್ನು ನವೀಕರಿಸಲು ಆರ್‌ಸಿಬಿ ಮ್ಯಾನೇಜ್‌ಮೆಂಟ್ ನಿರಾಕರಿಸಿದೆ. ಹೀಗಾಗಿಯೇ ಆ್ಯಂಡಿ ಫ್ಲವರ್ ರೂಪದಲ್ಲಿ ಹೊಸ ಕೋಚ್ ನೇಮಕ ಮಾಡಿದೆ.
ಆರ್‌ಸಿಬಿ ತಂಡ ಕೂಡಿಕೊಂಡ ಬೆನ್ನಲ್ಲೇ ಈ ಕುರಿತಂತೆ ಪ್ರತಿಕ್ರಿಯಿಸಿರುವ ಆ್ಯಂಡಿ ಫ್ಲವರ್, "ಕೋಚ್ ಆಗಿ ಮೈಕ್ ಹೆಸನ್ ಹಾಗೂ ಸಂಜಯ್ ಬಂಗಾರ್ ಅವರ ಕೊಡುಗೆಯನ್ನು ನಾನು ಗೌರವಿಸುತ್ತೇನೆ. ನಾನು ಈಗ ಮತ್ತೊಮ್ಮೆ ಫಾಫ್ ಜತೆಗೂಡಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಈ ಹಿಂದೆಯೂ ನಾವು ಒಟ್ಟಾಗಿ ಕೆಲಸ ಮಾಡಿದ್ದೇವೆ. ಈ ಪಾರ್ಟ್ನರ್‌ಶಿಪ್ ಹಾಗೂ ಬಾಂಧವ್ಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಎದುರು ನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ.
ಕಳೆದ ಆವೃತ್ತಿಯ ಐಪಿಎಲ್ ವರೆಗೂ ಆ್ಯಂಡಿ ಫ್ಲವರ್, ಲಖನೌ ಸೂಪರ್ ಜೈಂಟ್ಸ್ ತಂಡದ ಹೆಡ್ ಕೋಚ್ ಆಗಿ ನೇಮಕವಾಗಿದ್ದರು. ಇನ್ನು ಮುಂಬರುವ ಐಪಿಎಲ್ ಟೂರ್ನಿಯ ವೇಳೆ ಆ್ಯಂಡಿ ಫ್ಲವರ್, ರಾಜಸ್ಥಾನ ರಾಯಲ್ಸ್ ತಂಡ ಕೂಡಿಕೊಳ್ಳಲಿದ್ದಾರೆ ಎನ್ನುವಂತಹ ಮಾತುಗಳು ಕೇಳಿ ಬಂದಿದ್ದವು.
ಆ್ಯಂಡಿ ಫ್ಲವರ್ ಮಾರ್ಗದರ್ಶನದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವು ಕಳೆದೆರಡು ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸತತ ಎರಡು ಬಾರಿ ಪ್ಲೇ ಆಫ್ ಪ್ರವೇಶಿಸಿತ್ತು. ಇನ್ನು ಮುಂಬರುವ ಆವೃತ್ತಿಯ ಐಪಿಎಲ್ ಟೂರ್ನಿಗೆ ಫ್ಲವರ್ ಸ್ಥಾನಕ್ಕೆ ಆಸ್ಟ್ರೇಲಿಯಾದ ಜಸ್ಟಿನ್ ಲ್ಯಾಂಗರ್ ಅವರನ್ನು ಲಖನೌ ತನ್ನ ಹೆಡ್ ಕೋಚ್ ಆಗಿ ನೇಮಕ ಮಾಡಿಕೊಂಡಿದೆ.
ಚಾಂಪಿಯನ್ ಕೋಚ್ ಫ್ಲವರ್:
ಜಿಂಬಾಬ್ವೆ ಮೂಲದ ಕ್ರಿಕೆಟಿಗ, ಓರ್ವ ಯಶಸ್ವಿ ಕೋಚ್ ಆಗಿ ಗುರುತಿಸಿಕೊಂಡಿದ್ದು, ಟಿ20 ಕ್ರಿಕೆಟ್‌ನ ಯಶಸ್ವಿ ಕೋಚ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಆ್ಯಂಡಿ ಫ್ಲವರ್ ಮಾರ್ಗದರ್ಶನದಲ್ಲಿಯೇ 2010ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದು ಇಂಗ್ಲೆಂಡ್ ಗೆದ್ದ ಮೊದಲ ಐಸಿಸಿ ಟ್ರೋಫಿ ಎನಿಸಿಕೊಂಡಿತ್ತು.
ಇನ್ನುಳಿದಂತೆ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಮುಲ್ತಾನ್ ಸುಲ್ತಾನ್, ಐಎಲ್‌ಟಿ20 ಟೂರ್ನಿಯಲ್ಲಿ ಗಲ್ಫ್ ಜೈಂಟ್ಸ್ ಹಾಗೂ ದಿ ಹಂಡ್ರೆಡ್ ಪುರುಷರ ಟೂರ್ನಿಯಲ್ಲಿ ಟ್ರೆಂಟ್ ರಾಕೆಟ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಆ್ಯಂಡಿ ಫ್ಲವರ್ ಕೋಚ್ ಆಗಿ ಮಹತ್ವದ ಪಾತ್ರ ವಹಿಸಿದ್ದರು.
ಇನ್ನು ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆ್ಯಂಡಿ ಫ್ಲವರ್ ಮಾರ್ಗದರ್ಶನದಲ್ಲಿ ಸೇಂಟ್ ಲೂಸಿಯಾ ಕಿಂಗ್ ತಂಡವು ಎರಡು ಬಾರಿ ಫೈನಲ್‌ಗೇರಿತ್ತು. ಸೆಂಟ್ ಲೂಸಿಯಾ ಕಿಂಗ್‌ನಲ್ಲಿ ಆ್ಯಂಡಿ ಫ್ಲವರ್ ಮಾರ್ಗದರ್ಶನದಲ್ಲಿ ಫಾಫ್ ಡು ಪ್ಲೆಸಿಸ್ ಪಳಗಿದ್ದರು. ಇದೀಗ ಆ್ಯಂಡಿ & ಫಾಫ್ ಮತ್ತೆ ಜತೆಯಾಗಿದ್ದಾರೆ.
ಆರ್‌ಸಿಬಿ ಲಕ್ ಬದಲಾಗುತ್ತಾ?
ಐಪಿಎಲ್ ಟೂರ್ನಿಯಲ್ಲಿ ಕಳೆದ 16 ಆವೃತ್ತಿಯಿಂದ ಪಾಲ್ಗೊಳ್ಳುತ್ತಾ ಬಂದಿದ್ದರೂ ಇದುವರೆಗೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಮೂರು ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ್ದೇ ಆರ್‌ಸಿಬಿಯ ಇಲ್ಲಿಯವರೆಗಿನ ಸಾಧನೆಯಾಗಿದೆ. ಆ್ಯಂಡಿ ಫ್ಲವರ್ ಮಾರ್ಗದರ್ಶನದಲ್ಲಾದರೂ ಆರ್‌ಸಿಬಿ ಐಪಿಎಲ್ ಟ್ರೋಫಿ ಬರ ನೀಗಿಸಿಕೊಳ್ಳುತ್ತಾ ಕಾದು ನೋಡಬೇಕಿದೆ.