16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 31ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಾದಾಡಲಿವೆ.
ಇನ್ನು ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹೊಸ ಹುರುಪಿನೊಂದಿಗೆ ಸಜ್ಜಾಗಿದೆ. ಆರ್‌ಸಿಬಿ ತಂಡವು ಹೆಚ್ಚಾಗಿ ಈ ಬಾರಿಯು ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನೇ ನೆಚ್ಚಿಕೊಂಡಿದೆ.
ಇನ್ನು 2023ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ವಿರಾಟ್ ಕೊಹ್ಲಿ, ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ.
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 22.73ರ ಬ್ಯಾಟಿಂಗ್ ಸರಾಸರಿಯಲ್ಲಿ ಕೇವಲ 341 ರನ್ ಬಾರಿಸುವ ಮೂಲಕ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಹೀಗಿದ್ದೂ ಆರ್‌ಸಿಬಿ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಫಾಫ್ ಡು ಪ್ಲೆಸಿಸ್ ಬಳಿಕ ಕೊಹ್ಲಿ ಎರಡನೇ ಸ್ಥಾನ ಪಡೆದಿದ್ದರು.
ಕಳೆದ ವರ್ಷ ವಿರಾಟ್ ಕೊಹ್ಲಿ ರನ್ ಗಳಿಸಿಲ್ಲ ಎಂದ ಮಾತ್ರಕ್ಕೆ ಪ್ರತಿ ವರ್ಷವೂ ಹೀಗಾಗುವುದಿಲ್ಲ. ಈ ಬಾರಿ ವಿರಾಟ್ ಕೊಹ್ಲಿ, ಆರ್‌ಸಿಬಿ ತಂಡದ ಪರ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ ಎಂದು ಚೋಪ್ರಾ ಭವಿಷ್ಯ ನುಡಿದಿದ್ದಾರೆ.
ಇದೀಗ ತಮ್ಮ ಆಕಾಶವಾಣಿ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಆಕಾಶ್ ಚೋಪ್ರಾ, ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್, ಆರ್‌ಸಿಬಿ ತಂಡದ ಪರ ಇನಿಂಗ್ಸ್ ಆರಂಭಿಸಲಿದ್ದಾರೆ. ಇನ್ನು ರಜತ್ ಪಾಟೀದಾರ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿಸಿದ್ದಾರೆ.
ಇದಾದ ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೋಮ್ರರ್ ಹಾಗೂ ಶಹಬಾಜ್ ಅಹಮ್ಮದ್ ಕಣಕ್ಕಿಳಿಯಲಿದ್ದು, ಆನಂತರ ದಿನೇಶ್ ಕಾರ್ತಿಕ್ ಮ್ಯಾಚ್ ಫಿನಿಶರ್ ಪಾತ್ರವನ್ನು ನಿಭಾಯಿಸಲಿದ್ದಾರೆ ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ವಿಲ್ ಜ್ಯಾಕ್ಸ್ ಬದಲಿಗೆ ಮಿಚೆಲ್ ಬ್ರೇಸ್‌ವೆಲ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದ್ದು ಆರ್‌ಸಿಬಿ ಪಾಲಿಗೆ ಒಳ್ಳೆಯ ನಡೆಯಾಗಿದೆ. ಬ್ರೇಸ್‌ವೆಲ್ ಓರ್ವ ಗನ್ ಪ್ಲೇಯರ್ ಆಗಿದ್ದು, ಟಿ20 ನಾಡಿಮಿಡಿತವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಸ್ಪೋಟಕ ಬ್ಯಾಟರ್ ಆಗಿರುವ ಬ್ರೇಸ್‌ವೆಲ್, ಚಿನ್ನಸ್ವಾಮಿ ಮೈದಾನದಲ್ಲಿ ಒಳ್ಳೆಯ ಬೌಲಿಂಗ್ ಕೂಡಾ ಮಾಡಬಲ್ಲರು ಎಂದು ಅಭಿಪ್ರಾಯಪಟ್ಟಿದ್ದಾರೆ.