* ಟಾಸ್ ಬಳಿಕ ಆಡುವ ಹನ್ನೊಂದರ ಬಳಗ ಬದಲಿಸಲು ಅವಕಾಶ:
ಹೌದು, ಇಲ್ಲಿಯವರೆಗೆ ಐಪಿಎಲ್‌ನಲ್ಲಿ ಟಾಸ್‌ಗೆ ಬರುವ ನಾಯಕರು, ತಮ್ಮ ಆಡುವ ಹನ್ನೊಂದರ ಬಳಗದ ಪಟ್ಟಿಯೊಂದಿಗೆ ಮೈದಾನಕ್ಕೆ ಬರುತ್ತಿದ್ದರು. ಟಾಸ್ ಆಗುತ್ತಿದ್ದಂತೆಯೇ ತಮ್ಮ ಆಡುವ ಹನ್ನೊಂದರ ಬಳಗದ ಮಾಹಿತಿಯನ್ನು ಎದುರಾಳಿ ತಂಡದ ನಾಯಕರಿಗೆ ಮಾಹಿತಿ ಹಸ್ತಾಂತರಿಸುತ್ತಿದ್ದರು.
ಆದರೆ ಇದೀಗ ಹೊಸ ನಿಯಮದ ಪ್ರಕಾರ, ಟಾಸ್ ಆದ ಬಳಿಕವೂ ನಾಯಕನಿಗೆ ತಮ್ಮ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ತರಬೇಕು ಎಂದು ಅನಿಸಿದರೆ, ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಅದರೆ ತಂಡದ ನಾಯಕ ಟಾಸ್ ಬಳಿಕ, ತನ್ನ ತಂಡದ ಆಡುವ ಹನ್ನೊಂದು ಆಟಗಾರರು ಹಾಗೂ ಗರಿಷ್ಠ 5 ಬದಲಿ ಫೀಲ್ಡರ್‌ಗಳ ಹೆಸರನ್ನು ಲಿಖಿತ ರೂಪದಲ್ಲಿ ಬರೆದು ಪಂದ್ಯ ಆರಂಭಕ್ಕೂ ಮುನ್ನ ಮ್ಯಾಚ್ ರೆಫ್ರಿಗೆ ನೀಡಲು ಅವಕಾಶ ಒದಗಿಸಲಾಗಿದೆ.
ಒಮ್ಮೆ ತಮ್ಮ ಆಡುವ ಹನ್ನೊಂದರ ಬಳಗವನ್ನು ಅಧಿಕೃತಗೊಳಿಸಿದ ಬಳಿಕ ಪಂದ್ಯ ಆರಂಭಕ್ಕೂ ಮುನ್ನ ಎದುರಾಳಿ ತಂಡದ ನಾಯಕನ ಒಪ್ಪಿಗೆ ಇಲ್ಲದೇ ತನ್ನ ಆಡುವ ಹನ್ನೊಂದು ಆಟಗಾರರಲ್ಲಿ ಬದಲಾವಣೆ ತರಲು ಅವಕಾಶವಿಲ್ಲ
ಇನ್ನು ಬೌಲಿಂಗ್ ಮಾಡುವ ತಂಡವು ನಿಗದಿತ ಸಮಯದಲ್ಲಿ ಪ್ರತಿ ಓವರ್ ಪೂರ್ಣಗೊಳಿಸದಿದ್ದಲ್ಲಿ, ಓವರ್ ರೇಟ್ ಪೆನಾಲ್ಟಿ ಹಾಕುವ ನಿಯಮ ಜಾರಿಗೆ ತಂದಿದೆ. ಹೀಗಾದಲ್ಲಿ ಮರು ಓವರ್ ಮಾಡುವ ಸಂದರ್ಭದಲ್ಲಿ ಕೇವಲ 4 ಫೀಲ್ಡರ್‌ಗಳು ಮಾತ್ರ 30 ಯಾರ್ಡ್ಸ್ ಹೊರಗಿರಲು ಅವಕಾಶವಿರುತ್ತದೆ.
ಇನ್ನು ತಂಡಗಳು ಅಂಪೈರ್ ನೀಡುವ ವೈಡ್ ಹಾಗೂ ನೋಬಾಲ್ ತೀರ್ಪನ್ನು ಪ್ರಶ್ನಿಸಿ ಡಿಆರ್‌ಎಸ್ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಈಗಾಗಲೇ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಈ ರೂಲ್ಸ್ ಬಳಸಲಾಗುತ್ತಿದೆ.
ಒಂದು ವೇಳೆ ಬ್ಯಾಟರ್ ಚೆಂಡನ್ನು ಎದುರಿಸುವ ಸಂದರ್ಭದಲ್ಲಿ ಆತನ ಏಕಾಗ್ರತೆ ಧಕ್ಕೆ ತರುವಂತೆ ವಿಕೆಟ್ ಕೀಪರ್ ಹಾಗೂ ಕ್ಷೇತ್ರರಕ್ಷಕರು ಅನಗತ್ಯವಾಗಿ ಓಡಾಡಿದರೆ, ಅದನ್ನು ಅನ್ಯಾಯದ ಚಲನೆ ಎಂದು ತೀರ್ಮಾನಿಸಿ, ಪೆನಾಲ್ಟಿ ರೂಪದಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ 5 ರನ್ ನೀಡಲು ತೀರ್ಮಾನಿಸಲಾಗಿದೆ.ಇದಷ್ಟೇ ಅಲ್ಲದೇ ಆ ಚೆಂಡನ್ನು ಡೆಡ್ ಬಾಲ್ ಎಂದು ಘೋಷಿಸಲಾಗುವುದು.
ಇನ್ನು ಬಿಸಿಸಿಐ ಈ ಬಾರಿ ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್ ಜಾರಿಗೆ ತಂದಿರುವುದರಿಂದ ತಂಡದಲ್ಲಿ 15 ಆಟಗಾರರ ಬದಲಿಗೆ 16 ಆಟಗಾರರಿರಲು (11+5) ಅವಕಾಶ ಒದಗಿಸಲಾಗಿದೆ. ಇದರರ್ಥ ಇಂಪ್ಯಾಕ್ಟ್ ಪ್ಲೇಯರ್ ಬಳಸಿಕೊಳ್ಳಲು ತಂಡಗಳಿಗೆ ಹೆಚ್ಚಿನ ಅವಕಾಶ ಸಿಕ್ಕಂತಾಗಲಿದೆ.