ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಏಯ್ಡನ್ ಮಾರ್ಕ್‌ರಮ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ.
ತವರಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ 144 ರನ್ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಇನ್ನೂ 2 ಓವರ್ ಬಾಕಿ ಇರುವಂತೆಯೇ 8 ವಿಕೆಟ್ ಸುಲಭ ಜಯ ದಾಖಲಿಸಿದೆ.
ಮೊದಲೆರಡು ಪಂದ್ಯ ಸೋತು ಬಸವಳಿದಿದ್ದ ಆರೆಂಜ್ ಆರ್ಮಿ, ತಮ್ಮ ಅಭಿಮಾನಿಗಳಿಗೆ ಗೆಲುವಿನ ಸಿಹಿ ಉಣಬಡಿಸಿದೆ. ಇನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡದ ಓನರ್ ಕಾವ್ಯ ಮಾರನ್, ಪ್ರತಿ ಪಂದ್ಯದಲ್ಲೂ ಮೈದಾನದಲ್ಲಿ ಹಾಜರಿದ್ದು, ತಂಡವನ್ನು ಪ್ರೋತ್ಸಾಹಿಸುತ್ತಲೇ ಬರುತ್ತಿದ್ದಾರೆ.
ಪ್ರತಿ ಪಂದ್ಯದಲ್ಲೂ ಕ್ಯಾಮರಾಮನ್, ಕಾವ್ಯ ಮಾರನ್ ಅವರನ್ನು ಕ್ಯಾಮರಾ ಕಣ್ಣುಗಳಲ್ಲಿ ಸೆರೆ ಹಿಡಿಯುವ ಮೂಲಕ ಆಕೆಯ ಭಾವನೆಗಳನ್ನು ಟಿವಿ ಪರದೆಯ ಮೇಲೆ ಬಿತ್ತರಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ.
ಇನ್ನು, ಏಪ್ರಿಲ್ 09ರಂದು ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದ 19ನೇ ಓವರ್‌ನಲ್ಲಿ ಶಿಖರ್ ಧವನ್ 90 ರನ್ ಬಾರಿಸಿ ಮುನ್ನುಗ್ಗುತ್ತಿದ್ದಾಗ, ಕ್ಯಾಮರಾಮನ್, ಕಾವ್ಯ ಮಾರನ್ ಕಡೆ ಫೋಕಸ್ ಮಾಡಿದರು. ಆಗ ಕಿರಿಕಿರಿಗೊಂಡ ಕಾವ್ಯ ಮಾರನ್, 'ಹೋಗೋ ಆ ಕಡೆ' ಎಂದು ಗೊಣಗಿದ್ದಾರೆ. ಆ ವಿಡಿಯೋವೀಗ ವೈರಲ್ ಆಗಿದೆ.
6 ಆಗಸ್ಟ್ 1992 ರಂದು ಕಾವ್ಯ ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು ಮತ್ತು MBA ಪದವಿ ಪಡೆದಿದ್ದಾರೆ. ಅಂದಿನಿಂದ ಅವರು ತನ್ನ ತಂದೆ ಕಲಾನಿದಿ ಮಾರನ್ ಅವರ ವ್ಯವಹಾರದಲ್ಲಿ ಸಹಾಯ ಮಾಡುತ್ತಾ ಬಂದಿದ್ದಾರೆ. ಕಲಾನಿಧಿ ಮಾರನ್, ಸನ್ ನೆಟ್‌ವರ್ಕ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ.
30ರ ಹರೆಯದ ಕಾವ್ಯ ಕ್ರಿಕೆಟ್‌ನಲ್ಲಿ ತುಂಬಾ ಆಸಕ್ತಿ ಹೊಂದಿದ್ದಾರೆ, ಆದ್ದರಿಂದ ಅವಳು ತನ್ನ ತಂಡದ ಪ್ರತಿಯೊಂದು ಪಂದ್ಯದಲ್ಲೂ ಕಾಣಿಸಿಕೊಳ್ಳುತ್ತಾರೆ. ಇದರ ಜತೆಗೆ ಐಪಿಎಲ್ ಹರಾಜಿನ ವೇಳೆಯಲ್ಲಿಯೂ ಕಾವ್ಯ ಕಾಣಿಸಿಕೊಂಡಿದ್ದರು.