15ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 26ರಿಂದ ಆರಂಭವಾಗಲಿದ್ದು, ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರನ್ನರ್ ಅಪ್ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಕಣಕ್ಕಿಳಿಯುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ.
ಈ ಬಾರಿಯ ಸಂಪೂರ್ಣ ಲೀಗ್ ಹಂತದ ಐಪಿಎಲ್ ಪಂದ್ಯಗಳಿಗೆ ಮಹಾರಾಷ್ಟ್ರದ ನಾಲ್ಕು ಸ್ಟೇಡಿಯಂಗಳು ಆತಿಥ್ಯವನ್ನು ವಹಿಸಲಿದ್ದು, ನಾಕೌಟ್ ಪಂದ್ಯಗಳು ಎಲ್ಲಿ ನಡೆಯಲಿದೆ ಎನ್ನುವುದರ ಬಗ್ಗೆ ಬಿಸಿಸಿಐ ಇನ್ನೂ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ.
ಇದೆಲ್ಲದರ ನಡುವೆ 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಹಿನ್ನೆಡೆಯುಂಟಾಗುವಂತಹ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್, ಮುಂಬೈ ಪಾಲಿನ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
ಮಾರ್ಚ್ 27ರಂದು ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ತನ್ನ ಪಾಲಿನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಿಲಿದೆ.
ಹೆಬ್ಬೆಟ್ಟಿನ ಗಾಯದ ಸಮಸ್ಯೆಯಿಂದಾಗಿ ಶ್ರೀಲಂಕಾ ವಿರುದ್ದದ ಟಿ20 ಸರಣಿಯಿಂದ ಹೊರಬಿದ್ದಿದ್ದ ಸೂರ್ಯಕುಮಾರ್ ಯಾದವ್, ಮೊದಲ ಪಂದ್ಯಕ್ಕೆ ಸಂಪೂರ್ಣ ಫಿಟ್ ಆಗಿರುವ ಸಾಧ್ಯತೆ ಕಡಿಮೆ. ಹೀಗಾಗಿ ಮುಂಬೈ ಪಾಲಿನ ಎರಡನೇ ಪಂದ್ಯದಲ್ಲಿ ಸೂರ್ಯ ಸಂಪೂರ್ಣ ಫಿಟ್ ಆಗಿ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ.
ಮುಂಬೈ ಇಂಡಿಯನ್ಸ್ ತಂಡವು ತನ್ನ ಪಾಲಿನ ಎರಡನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದ್ದು, ಏಪ್ರಿಲ್ 02ರಂದು ನಡೆಯಲಿದೆ. ಈ ಪಂದ್ಯದ ವೇಳೆಗೆ ಸೂರ್ಯಕುಮಾರ್ ಯಾದವ್ ಸಂಪೂರ್ಣ ಫಿಟ್ ಆಗಿ ಮುಂಬೈ ಇಂಡಿಯನ್ಸ್ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸೂರ್ಯಕುಮಾರ್ ಯಾದವ್ ಸದ್ಯ ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದು, ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಸದ್ಯದಲ್ಲಿಯೇ ಫಿಟ್ನೆಸ್ ಪಾಸ್ ಮಾಡುವ ವಿಶ್ವಾಸವಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಮೆಗಾ ಹರಾಜಿಗೂ ಮುನ್ನ ಸೂರ್ಯಕುಮಾರ್ ಯಾದವ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಬರೋಬ್ಬರಿ 8 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿತ್ತು. ಮುಂಬೈ ಪರ ಸೂರ್ಯಕುಮಾರ್ ಯಾದವ್ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.