ಕಳೆದ 14 ಐಪಿಎಲ್ ಆವೃತ್ತಿಗಳಿಂದಲೂ ಚಾಂಪಿಯನ್ ಪಟ್ಟಕ್ಕೇರುವ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೀಗ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕಪ್ ಗೆಲ್ಲುವ ಛಲದಿಂದ ಫಾಫ್ ಡು ಪ್ಲೆಸಿಸ್‌ಗೆ ನಾಯಕ ಪಟ್ಟ ಕಟ್ಟಿದೆ.
15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿಗೆ ಆಪತ್ಭಾಂಧವ ಎನಿಸಿದ್ದ ಎಬಿ ಡಿವಿಲಿಯರ್ಸ್ ದಿಢೀರ್ ಎನ್ನುವಂತೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದರು. ಹೀಗಾಗಿ ಮುಂಬರುವ ಐಪಿಎಲ್‌ನಲ್ಲಿ ಎಬಿಡಿ ಸ್ಥಾನ ತುಂಬುವವರು ಯಾರು ಎನ್ನುವ ಪ್ರಶ್ನೆ ಎದ್ದಿದೆ.
ಈ ಪ್ರಶ್ನೆಗೆ ಉತ್ತರಿಸಿದ ಆರ್‌ಸಿಬಿ ನೂತನ ನಾಯಕ ಫಾಫ್ ಡು ಪ್ಲೆಸಿಸ್, ಅವರೊಬ್ಬ ದಿಗ್ಗಜ ಕ್ರಿಕೆಟಿಗ. ಜಗತ್ತಿನ ಯಾವೊಬ್ಬ ಕ್ರಿಕೆಟಿಗ ಕೂಡಾ ಎಬಿ ಡಿವಿಲಿಯರ್ಸ್ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ. ನಾನು ಕೂಡಾ ಎಬಿಡಿಗೆ ಸರಿಸಮನಲ್ಲ. ಅವರೊಬ್ಬ ನಿಜಕ್ಕೂ ದಿಗ್ಗಜ ಕ್ರಿಕೆಟಿಗ ಎಂದು ಫಾಫ್ ಅಭಿಪ್ರಾಯಪಟ್ಟಿದ್ದಾರೆ.
ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ಎನಿಸಿಕೊಂಡಿದ್ದ ಎಬಿಡಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 157 ಪಂದ್ಯಗಳನ್ನಾಡಿ 4,522 ರನ್ ಬಾರಿಸಿದ್ದಾರೆ. ಹಲವು ಪಂದ್ಯಗಳಲ್ಲಿ ಎಬಿಡಿ ಏಕಾಂಗಿಯಾಗಿ ಆರ್‌ಸಿಬಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.
ದುರಾದೃಷ್ಟವಶಾತ್ ಇತ್ತೀಚಿನ ದಿನಗಳಲ್ಲಿ ನಾವಿಬ್ಬರು ಒಟ್ಟಾಗಿ ಕ್ರಿಕೆಟ್ ಆಡಲು ಸಾಧ್ಯವಾಗಲಿಲ್ಲ. ಆದರೆ ಇದೀಗ ಎಬಿಡಿ ಬದಲು ನಾನು ಆರ್‌ಸಿಬಿ ತಂಡವನ್ನು ಕೂಡಿಕೊಂಡಿದ್ದೇನೆ. ಇದೊಂದು ರೀತಿಯ ವಿಶೇಷವಾದ ಅನುಭವ ಎಂದು ಫಾಫ್ ಹೇಳಿದ್ದಾರೆ.
15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಫಾಫ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಹೇಜಲ್‌ವುಡ್ ಅವರನ್ನೊಳಗೊಂಡ ತಂಡವನ್ನು ಮುನ್ನಡೆಸಲಿದ್ದಾರೆ. ಆರ್‌ಸಿಬಿ ತಂಡವು ಮಾರ್ಚ್ 27ರಂದು ಪಂಜಾಬ್ ಕಿಂಗ್ಸ್ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.