IPL 2021: ಈ 5 ಬ್ಯಾಟರ್‌ಗಳು ಗುಜರಾತ್ ಟೈಟಾನ್ಸ್ ಪರ ಜೇಸನ್ ರಾಯ್ ಸ್ಥಾನ ತುಂಬಬಲ್ಲರು..!

First Published | Mar 2, 2022, 6:18 PM IST

ಬೆಂಗಳೂರು: 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿ ಆರಂಭಕ್ಕೂ ಮುನ್ನವೇ ನೂತನ ಫ್ರಾಂಚೈಸಿ ಗುಜರಾತ್ ಟೈಟಾನ್ಸ್ (Gujarat Titans) ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ಜೇಸನ್ ರಾಯ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ತಾವು ಪಾಲ್ಗೊಳ್ಳುವುದಿಲ್ಲ ಎಂದು ಘೋಷಿಸಿದ್ದಾರೆ. ಜೇಸನ್ ರಾಯ್ (Jason Roy) ಅವರನ್ನು 2 ಕೋಟಿ ರುಪಾಯಿ ನೀಡಿ ಗುಜರಾತ್ ಟೈಟಾನ್ಸ್ ಮೆಗಾ ಹರಾಜಿನಲ್ಲಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಇದೀಗ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಜೇಸನ್ ರಾಯ್ ಅವರ ಬದಲಿ ಆಟಗಾರನ ಹುಡುಕಾಟದಲ್ಲಿದೆ. ಈ ಸಂದರ್ಭದಲ್ಲಿ ಜೇಸನ್ ರಾಯ್ ಸ್ಥಾನ ತುಂಬಬಲ್ಲ ಆಟಗಾರರ ವಿವರ ಇಲ್ಲಿದೆ ನೋಡಿ

1. ಆ್ಯರೋನ್ ಫಿಂಚ್
ಆಸ್ಟ್ರೇಲಿಯಾದ ಸೀಮಿತ ಓವರ್‌ಗಳ ತಂಡದ ನಾಯಕ ಆ್ಯರೋನ್ ಫಿಂಚ್ ಈ ಬಾರಿಯ ಮೆಗಾ ಹರಾಜಿನಲ್ಲಿ ಅಚ್ಚರಿಯೆನ್ನುವಂತೆ ಅನ್‌ಸೋಲ್ಡ್‌ ಆಗಿದ್ದರು. ಫಿಂಚ್ ನೇತೃತ್ವದಲ್ಲಿ ಕೆಲ ತಿಂಗಳ ಹಿಂದಷ್ಟೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಕೇವಲ 1.5 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಫಿಂಚ್‌ರನ್ನು ಗುಜರಾತ್ ಫ್ರಾಂಚೈಸಿ ತನ್ನ ತೆಕ್ಕೆಗೆ ಸೆಳೆದುಕೊಂಡರೆ ಶುಭ್‌ಮನ್ ಗಿಲ್ ಜತೆ ಫಿಂಚ್ ಸ್ಪೋಟಕ ಆರಂಭ ಒದಗಿಸಿಕೊಡಬಲ್ಲರು. ಫಿಂಚ್ 2010ರಿಂದ 2020ರ ಅವಧಿಯಲ್ಲಿ ಒಟ್ಟು 8 ಐಪಿಎಲ್‌ ತಂಡವನ್ನು ಪ್ರತಿನಿಧಿಸಿದ ಅನುಭವವಿದೆ.

Tap to resize

Martin Guptill

2. ಮಾರ್ಟಿನ್ ಗಪ್ಟಿಲ್

ನ್ಯೂಜಿಲೆಂಡ್‌ನ ಅನುಭವಿ ಆರಂಭಿಕ ಬ್ಯಾಟರ್‌ ಮಾರ್ಟಿನ್ ಗಪ್ಟಿಲ್ ಸಹಾ ಈ ಬಾರಿಯ ಐಪಿಎಲ್ ಆಟಗಾರರ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿ ಅಚ್ಚರಿ ಮೂಡಿಸಿದ್ದಾರೆ. ಕೇವಲ 75 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಗಪ್ಟಿಲ್‌ರನ್ನು ಖರೀದಿಸಲು ಯಾವ ಫ್ರಾಂಚೈಸಿಯು ಒಲವು ತೋರಿರಲಿಲ್ಲ.

35 ವರ್ಷದ ಮಾರ್ಟಿನ್ ಗಪ್ಟಿಲ್‌ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅಪಾರ ಅನುಭವವನ್ನು ಹೊಂದಿದ್ದು, ಇದುವರೆಗೂ 3,299 ರನ್‌ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಗುಜರಾತ್ ಫ್ರಾಂಚೈಸಿಯು ಗಪ್ಟಿಲ್‌ಗೆ ಗಾಳ ಹಾಕುವ ಸಾಧ್ಯತೆಯಿದೆ.

3. ಡೇವಿಡ್ ಮಲಾನ್‌

ಇಂಗ್ಲೆಂಡ್‌ನ ಅತ್ಯಂತ ನಂಬಿಗಸ್ಥ ಬ್ಯಾಟರ್‌ ಡೇವಿಡ್ ಮಲಾನ್ ಕೂಡಾ ಈ ಬಾರಿಯ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಮಲಾನ್‌ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು.

1.5 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಮಲಾನ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್‌ ಆಗಿದ್ದರು. ಸದ್ಯ ಐಸಿಸಿ ಟಿ20 ಶ್ರೇಯಾಂಕದಲ್ಲಿ 4ನೇ ಸ್ಥಾನ ಹೊಂದಿರುವ ಮಲಾನ್‌ ಗುಜರಾತ್ ಟೈಟಾನ್ಸ್ ತಂಡದ ಪಾಲಿಗೆ ಅಗ್ರಕ್ರಮಾಂಕಕ್ಕೆ ಬಲ ತುಂಬುವ ಸಾಮರ್ಥ್ಯ ಹೊಂದಿದ್ದಾರೆ.

4. ಸುರೇಶ್ ರೈನಾ
ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆಗುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ರೈನಾ ಹರಾಜಿನಲ್ಲಿ ಯಾವ ಫ್ರಾಂಚೈಸಿಗೂ ಬೇಡ ಎನಿಸಿದ್ದರು.

ಐಪಿಎಲ್‌ನಲ್ಲಿ ಇದುವರೆಗೂ ಒಟ್ಟು 205 ಪಂದ್ಯಗಳನ್ನಾಡಿರುವ ರೈನಾ 32.52ರ ಬ್ಯಾಟಿಂಗ್ ಸರಾಸರಿಯಲ್ಲಿ 5,528 ರನ್ ಬಾರಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 39 ಅರ್ಧಶತಕಗಳು ಸೇರಿವೆ. ಹೀಗಾಗಿ ಗುಜರಾತ್ ಟೈಟಾನ್ಸ್ ಪಾಲಿಗೆ ರೈನಾ ಉತ್ತಮ ಆಯ್ಕೆಯಾಗಬಲ್ಲರು.

5. ಶಕೀಬ್ ಅಲ್ ಹಸನ್

ಆಧುನಿಕ ಕ್ರಿಕೆಟ್‌ನ ಸೂಪರ್‌ಸ್ಟಾರ್ ಆಲ್ರೌಂಡರ್ ಎನಿಸಿಕೊಂಡಿರುವ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಕೂಡಾ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದರು. 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಶಕೀಬ್ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದರು.

ಐಸಿಸಿ ಟಿ20 ಆಲ್ರೌಂಡರ್‌ಗಳ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಶಕೀಬ್, ಗುಜರಾತ್ ಟೈಟಾನ್ಸ್ ತಂಡಕ್ಕೆ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ತಂಡಕ್ಕೆ ಆಸರೆಯಾಗುವ ಕ್ಷಮತೆ ಹೊಂದಿದ್ದಾರೆ. ಶಕೀಬ್ ಕೂಡಾ ಜೇಸನ್ ರಾಯ್ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲವರಾಗಿದ್ದಾರೆ.

Latest Videos

click me!