
1. ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್ - 15.25 ಕೋಟಿ ರುಪಾಯಿ
ಜಾರ್ಖಂಡ್ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು 15.25 ಕೋಟಿ ರುಪಾಯಿ ನೀಡಿ ಖರೀದಿಸುವ ಮೂಲಕ ಈ ಆವೃತ್ತಿಯ ಐಪಿಎಲ್ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ತಂಡ ಸೇರಿದ ಆಟಗಾರ ಎನಿಸಿದ್ದರು.
ದುಬಾರಿ ಮೊತ್ತಕ್ಕೆ ಮುಂಬೈ ತಂಡ ಕೂಡಿಕೊಂಡಿದ್ದ ಇಶಾನ್ ಕಿಶನ್ ಸಾಕಷ್ಟು ನಿರೀಕ್ಷೆಯ ಭಾರವನ್ನು ಹೊರಬೇಕಿತ್ತು. ಇಶಾನ್ ಕಿಶನ್ 14 ಪಂದ್ಯಗಳನ್ನಾಡಿ 3 ಅರ್ಧಶತಕ ಸಹಿತ 418 ರನ್ ಗಳಿಸಿದರು. ಇದರ ಹೊರತಾಗಿಯೂ ಮುಂಬೈ ಇಂಡಿಯನ್ಸ್ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
2. ಚೆನ್ನೈ ಸೂಪರ್ ಕಿಂಗ್ಸ್: ದೀಪಕ್ ಚಹಾರ್- 14 ಕೋಟಿ ರುಪಾಯಿ
ಮುಂಬೈ ಇಂಡಿಯನ್ಸ್ ಹರಾಜಿನಲ್ಲಿ ಜಿದ್ದಿಗೆ ಬಿದ್ದು ಇಶಾನ್ ಕಿಶನ್‌ರನ್ನು ಖರೀದಿಸಿದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡಾ ಬರೋಬ್ಬರಿ 14 ಕೋಟಿ ರುಪಾಯಿ ನೀಡಿ ಮಾರಕ ವೇಗಿ ದೀಪಕ್ ಚಹಾರ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ದುರಾದೃಷ್ಟವಶಾತ್ ಫಿಟ್ನೆಸ್ ಸಮಸ್ಯೆ ಚಹರ್ ಅವರನ್ನು ಇನ್ನಿಲ್ಲದಂತೆ ಕಾಡಿತು. ಇದರ ಜತೆಗೆ ಐಪಿಎಲ್ ಟೂರ್ನಿಗೂ ಮುನ್ನ ನಡೆದ ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿ ವೇಳೆ ಗಾಯಗೊಂಡ ದೀಪಕ್ ಚಹರ್, 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದಲೇ ಹೊರಬಿದ್ದರು. ಪರಿಣಾಮ ಸಿಎಸ್‌ಕೆ ತಂಡವು ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
3. ಕೋಲ್ಕತಾ ನೈಟ್ ರೈಡರ್ಸ್: ಶ್ರೇಯಸ್ ಅಯ್ಯರ್- 12.25 ಕೋಟಿ ರುಪಾಯಿ
ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೊದಲ ಬಾರಿಗೆ ಫೈನಲ್‌ಗೆ ಕೊಂಡೊಯ್ದಿದ್ದ ಶ್ರೇಯಸ್ ಅಯ್ಯರ್ ಅವರನ್ನು ಈ ಬಾರಿಯ ಹರಾಜಿನಲ್ಲಿ ಕೆಕೆಆರ್ ತಂಡವು 12.5 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಯಾವುದೇ ಕ್ರಮಾಂಕದಲ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸಬಲ್ಲ ಶ್ರೇಯಸ್ ಅಯ್ಯರ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿದ್ದವು.
ಆದರೆ ಶ್ರೇಯಸ್ ಅಯ್ಯರ್ 14 ಪಂದ್ಯಗಳಿಂದ ಕೇವಲ 401 ಗಳಿಸಲಷ್ಟೇ ಶಕ್ತರಾದರು. ಇನ್ನು ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ತಂಡವು ಈ ಬಾರಿ ನಿರೀಕ್ಷಿತ ಪ್ರದರ್ಶನ ತೋರದೇ 7ನೇ ಸ್ಥಾನ ಪಡೆದು ಲೀಗ್ ಹಂತದಲ್ಲೇ ಅಭಿಯಾನ ಮುಗಿಸಿತು.
4. ಪಂಜಾಬ್ ಕಿಂಗ್ಸ್: ಲಿಯಾಮ್ ಲಿವಿಂಗ್‌ಸ್ಟೋನ್ - 11.50 ಕೋಟಿ ರುಪಾಯಿ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ಇಂಗ್ಲೆಂಡ್ ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್‌ರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು 11.50 ಕೋಟಿ ರುಪಾಯಿ ನೀಡಿ ಖರೀದಿಸಿತ್ತು.
ಈ ಬಾರಿಯ ಐಪಿಎಲ್‌ನಲ್ಲಿ ಲಿವಿಂಗ್‌ಸ್ಟೋನ್ 14 ಪಂದ್ಯಗಳನ್ನಾಡಿ 182ರ ಸ್ಟ್ರೈಕ್‌ರೇಟ್‌ನಲ್ಲಿ 437 ರನ್ ಚಚ್ಚಿದ್ದರು. ಇನ್ನು ಬೌಲಿಂಗ್‌ನಲ್ಲಿ 6 ವಿಕೆಟ್ ಕಬಳಿಸುವ ಮೂಲಕ ಮಿಂಚಿದ್ದರು. ಇದರ ಹೊರತಾಗಿಯೂ ಪಂಜಾಬ್ ತಂಡವು ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
5. ಆರ್‌ಸಿಬಿ: ಹರ್ಷಲ್ ಪಟೇಲ್&ಹಸರಂಗ - 10.75 ಕೋಟಿ ರುಪಾಯಿ
ಆರ್‌ಸಿಬಿ ತಂಡವು ಡೆತ್ ಓವರ್ ಸ್ಪೆಷಲಿಸ್ಟ್ ಹರ್ಷಲ್ ಪಟೇಲ್ ಹಾಗೂ ಶ್ರೀಲಂಕಾದ ಮಿಸ್ಟ್ರಿ ಸ್ಪಿನ್ನರ್ ವನಿಂದು ಹಸರಂಗ ಅವರನ್ನು ತಲಾ 10.75 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಈ ಇಬ್ಬರು ಆಟಗಾರರು ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಯಶಸ್ವಿಯಾದರು.
ಹೊಡಿಬಡಿಯಾಟಕ್ಕೆ ಹೆಸರಾಗಿರುವ ಐಪಿಎಲ್‌ನಲ್ಲಿ ಹರ್ಷಲ್ ಪಟೇಲ್ ಕೇವಲ 7.66ರ ಎಕಾನಮಿಯಲ್ಲಿ ರನ್ ನೀಡಿ 19 ವಿಕೆಟ್ ಕಬಳಿಸಿ ಮಿಂಚಿದರೆ, ಲಂಕಾದ ಸ್ಪಿನ್ನರ್ ವನಿಂದು ಹಸರಂಗ 26 ವಿಕೆಟ್ ಕಬಳಿಸುವ ಮೂಲಕ ಟೂರ್ನಿಯಲ್ಲಿ ಎರಡನೇ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಎನಿಸಿಕೊಂಡರು. ಹೀಗಾಗಿ ಆರ್‌ಸಿಬಿ ಎರಡನೇ ಕ್ವಾಲಿಫೈಯರ್ ಹಂತ ತಲುಪಿ ಮೂರನೇ ಸ್ಥಾನ ಗಳಿಸಿತು.
6. ಡೆಲ್ಲಿ ಕ್ಯಾಪಿಟಲ್ಸ್: ಶಾರ್ದೂಲ್ ಠಾಕೂರ್- 10.75 ಕೋಟಿ ರುಪಾಯಿ
ಡೆತ್ ಓವರ್ ಸ್ಪೆಷಲಿಸ್ಟ್ ಹಾಗೂ ಕೆಳ ಕ್ರಮಾಂಕದಲ್ಲಿ ಉಪಯುಕ್ತ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ಶಾರ್ದೂಲ್ ಠಾಕೂರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 10.75 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಆದರೆ ಶಾರ್ದೂಲ್ ನಿರೀಕ್ಷಿತ ಪ್ರದರ್ಶನ ತೋರಲು ಯಶಸ್ವಿಯಾಗಲಿಲ್ಲ.
ಕಳೆದ ಆವೃತ್ತಿಯಲ್ಲಿ ಸಿಎಸ್‌ಕೆ ಪರ 21 ವಿಕೆಟ್ ಕಬಳಿಸಿ ಮಿಂಚಿದ್ದ ಶಾರ್ದೂಲ್ ಠಾಕೂರ್, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೇವಲ 15 ವಿಕೆಟ್ ಗಳಿಸಲಷ್ಟೇ ಶಕ್ತರಾದರು. ಡೆಲ್ಲಿ ಕ್ಯಾಪಿಟಲ್ಸ್ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
7. ಸನ್‌ರೈಸರ್ಸ್ ಹೈದರಾಬಾದ್: ನಿಕೋಲಸ್ ಪೂರನ್ - 10.75
ಸನ್‌ರೈಸರ್ಸ್ ಹೈದರಾಬಾದ್ ತಂಡವು ಡೇವಿಡ್ ವಾರ್ನರ್ ಅವರನ್ನು ಕೈಬಿಟ್ಟು, ನಿಕೋಲಸ್ ಪೂರನ್‌ಗೆ ಬರೋಬ್ಬರಿ 10.75 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಪೂರನ್ ಈ ಬಾರಿ ಸಮಾಧಾನಕರ ಪ್ರದರ್ಶನ ತೋರಿದ್ದಾರೆ.
ಕಳೆದ ಆವೃತ್ತಿಯಲ್ಲಿ ಪಂಜಾಬ್ ಪರ 12 ಪಂದ್ಯಗಳನ್ನಾಡಿ 85 ರನ್ ಗಳಿಸಿದ್ದ ಪೂರನ್, ಈ ಬಾರಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ 144.34ರ ಸ್ಟ್ರೈಕ್‌ರೇಟ್‌ನಲ್ಲಿ 306 ರನ್ ಚಚ್ಚಿದ್ದರು. ಹೀಗಿದ್ದೂ ಸನ್‌ರೈಸರ್ಸ್ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
8. ಗುಜರಾತ್ ಟೈಟಾನ್ಸ್: ಲಾಕಿ ಫರ್ಗ್ಯೂಸನ್ - 10 ಕೋಟಿ ರುಪಾಯಿ
ಐಪಿಎಲ್‌ನ ನೂತನ ಫ್ರಾಂಚೈಸಿಯಾದ ಗುಜರಾತ್ ಟೈಟಾನ್ಸ್, ಕಿವೀಸ್ ಮಾರಕ ವೇಗಿ ಲಾಕಿ ಫರ್ಗ್ಯೂಸನ್ ಅವರನ್ನು 10 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ನಿರಂತರವಾಗಿ 150+ ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಕ್ಷಮತೆ ಫರ್ಗ್ಯೂಸನ್‌ಗಿದೆ.
ಲಾಕಿ ಫರ್ಗ್ಯೂಸನ್, ಗುಜರಾತ್ ಟೈಟಾನ್ಸ್ ಪರ 13 ಪಂದ್ಯಗಳನ್ನಾಡಿ 13 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಬೌಲಿಂಗ್‌ನಲ್ಲಿ ಕೊಂಚ ದುಬಾರಿಯಾಗಿದ್ದರಿಂದ ಫರ್ಗ್ಯೂಸನ್ ಕೆಲ ಪಂದ್ಯಗಳ ಮಟ್ಟಿಗೆ ಬೆಂಚ್ ಕಾಯಿಸಬೇಕಾಗಿ ಬಂತು. ಹೀಗಿದ್ದೂ ಗುಜರಾತ್ ಟೈಟಾನ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತು.
9. ರಾಜಸ್ಥಾನ ರಾಯಲ್ಸ್: ಪ್ರಸಿದ್ಧ್ ಕೃಷ್ಣ- 10 ಕೋಟಿ ರುಪಾಯಿ
ಕರ್ನಾಟಕ ಮೂಲದ ನೀಳ ಕಾಯದ ವೇಗಿ ಪ್ರಸಿದ್ಧ್ ಕೃಷ್ಣ ಅವರನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಬರೋಬ್ಬರಿ 10 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ರಾಯಲ್ಸ್ ತಂಡವು ಫೈನಲ್ ಪ್ರವೇಶಿಸಲು ಪ್ರಸಿದ್ಧ್ ಪ್ರಮುಖ ಪಾತ್ರ ವಹಿಸಿದ್ದರು.
ರಾಜಸ್ಥಾನ ರಾಯಲ್ಸ್ ಪರ ಎಲ್ಲಾ 17 ಪಂದ್ಯಗಳನ್ನಾಡಿದ ಪ್ರಸಿದ್ದ್ ಪ್ರಮುಖ 19 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲೂ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ಎದುರು ಕೇವಲ 22 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ರಾಯಲ್ಸ್ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
10. ಲಖನೌ ಸೂಪರ್ ಜೈಂಟ್ಸ್: ಆವೇಶ್ ಖಾನ್- 10 ಕೋಟಿ ರುಪಾಯಿ
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 16 ಪಂದ್ಯಗಳಿಂದ 24 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದ ಆವೇಶ್ ಖಾನ್ ಅವರನ್ನು ಈ ಬಾರಿ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಬರೋಬ್ಬರಿ 10 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಿಧಾನಗತಿಯ ಆರಂಭವನ್ನು ಪಡೆದರಾದರೂ, ಉಮ್ರಾನ್ ಮಲಿಕ್, ಮೊಯ್ಸಿನ್ ಖಾನ್ ಅವರ ಅಬ್ಬರದ ಮುಂದೆ ಆವೇಶ್ ಖಾನ್ ಅಷ್ಟೊಂದು ಗಮನ ಸೆಳೆಯಲಿಲ್ಲ. ಆವೇಶ್ ಖಾನ್ 13 ಪಂದ್ಯಗಳಿಂದ 18 ವಿಕೆಟ್ ಕಬಳಿಸಿದರು. ಲಖನೌ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.