IPL 2022: ಈ ಮೂರು ಕಾರಣಕ್ಕಾಗಿಯಾದರೂ ಆರ್‌ಸಿಬಿ ಹರಾಜಿನಲ್ಲಿ ಸ್ಟೀವ್ ಸ್ಮಿತ್‌ರನ್ನು ಖರೀದಿಸಬೇಕು..!

First Published Feb 5, 2022, 1:32 PM IST

ಬೆಂಗಳೂರು: ಬಹುನಿರೀಕ್ಷಿತ 2022ನೇ ಸಾಲಿನ ಐಪಿಎಲ್ (IPL Auction 2022) ಆಟಗಾರರ ಹರಾಜಿಗೆ ದಿನಗಣನೆ ಆರಂಭವಾಗಿದೆ. ಇದೇ ಫೆಬ್ರವರಿ 12 ಹಾಗೂ 13ರಂದು ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು, ಎಲ್ಲಾ 10 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲು ರಣತಂತ್ರ ಹೆಣೆಯಲಾರಂಭಿಸಿವೆ. ಹೊಸ ನಾಯಕನ ಹುಡುಕಾಟದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡಕ್ಕೆ ಸ್ಟೀವ್‌ ಸ್ಮಿತ್ (Steve Smith) ಉತ್ತಮ ಆಯ್ಕೆಯಾಗಬಲ್ಲರು. ಈ ಕೆಳಕಂಡ ಮೂರು ಕಾರಣಗಳಿಗೆ ಆರ್‌ಸಿಬಿ ಸ್ಟೀವ್ ಸ್ಮಿತ್‌ರನ್ನು ಖರೀದಿಸಬೇಕು.

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಸ್ಟೀವ್ ಸ್ಮಿತ್‌ರನ್ನು ನಾಯಕತ್ವದಿಂದ ಕೆಳಗಿಳಿಸಿದ ಬಳಿಕ, ಸ್ಟೀವ್ ಸ್ಮಿತ್ ಐಪಿಎಲ್‌ ಫ್ರಾಂಚೈಸಿಗಳ ಗಮನ ಸೆಳೆಯುವಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಕಳೆದ ಆವೃತ್ತಿಯಲ್ಲಿ ಸ್ಟೀವ್‌ ಸ್ಮಿತ್‌ರನ್ನು ಕೇವಲ 2.2 ಕೋಟಿ ರುಪಾಯಿ ನೀಡಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಖರೀದಿಸಿತ್ತು.

ಕಳೆದ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಸ್ಟೀವ್‌ ಸ್ಮಿತ್ ಮೂಲ ಬೆಲೆಯಾದ 2 ಕೋಟಿ ರುಪಾಯಿಗೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯು ಬಿಡ್‌ ಮಾಡಿತ್ತು. ಆದರೆ ಆ ಬಳಿಕ ಹೆಚ್ಚಿಗೆ ಬಿಡ್‌ ಮಾಡಲು ಆರ್‌ಸಿಬಿ ಫ್ರಾಂಚೈಸಿ ಮನಸ್ಸು ಮಾಡಿರಲಿಲ್ಲ.

ಆರ್‌ಸಿಬಿ ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗುಡ್‌ ಬೈ ಹೇಳಿರುವುದರಿಂದ ಬೆಂಗಳೂರು ಮೂಲದ ಫ್ರಾಂಚೈಸಿಯು ಹೊಸ ನಾಯಕನ ಹುಡುಕಾಟದಲ್ಲಿದೆ. ಆರ್‌ಸಿಬಿ ಈ ಕೆಳಗಿನ ಮೂರು ಕಾರಣಕ್ಕಾಗಿ ಸ್ಮಿತ್‌ರನ್ನು ಖರೀದಿಸಿದರೆ, ಒಳ್ಳೆಯ ಆಯ್ಕೆಯಾಗಬಲ್ಲರು.

1. ಉತ್ತಮ ನಾಯಕತ್ವ ಗುಣ ಹೊಂದಿರುವ ಸ್ಮಿತ್, ಹೊಸ ನಾಯಕನಿಗೆ ಮಾರ್ಗದರ್ಶನ ಮಾಡಬಲ್ಲರು

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡವನ್ನು ಮೂರು ಮಾದರಿಯಲ್ಲೂ ಯಶಸ್ವಿಯಾಗಿ ಮುನ್ನಡೆಸಿದ ಅನುಭವ ಇರುವ ಸ್ಟೀವ್ ಸ್ಮಿತ್, ಆರ್‌ಸಿಬಿ ತಂಡಕ್ಕೆ ನಾಯಕನಾಗಿಯೂ ಕಾರ್ಯ ನಿರ್ವಹಿಸಬಲ್ಲರು. ಇದಷ್ಟೇ ಹೊಸ ನಾಯಕನಿಗೆ ಸೂಕ್ತ ಸಂದರ್ಭದಲ್ಲಿ ಮಾರ್ಗದರ್ಶನವನ್ನು ಮಾಡಬಲ್ಲರು. ಈ ಕಾರಣಕ್ಕಾಗಿ ಸ್ಮಿತ್ ಆರ್‌ಸಿಬಿ ತಂಡ ಸೇರಿಕೊಂಡರೆ, ಮತ್ತಷ್ಟು ತಂಡ ಬಲಿಷ್ಠವಾಗಲಿದೆ.

2. ನಂಬಿಗಸ್ಥ ಮೂರನೇ ಕ್ರಮಾಂಕದ ಬ್ಯಾಟರ್‌

ಸ್ಟೀವ್ ಸ್ಮಿತ್‌ಗೆ ಪರಿಸ್ಥಿತಿಗನುಗುಣವಾಗಿ ಬ್ಯಾಟ್ ಬೀಸುವ ಕಲೆ ಕರತಲಾಮಲಕವಾಗಿದೆ. ಐಪಿಎಲ್‌ನಲ್ಲಿ ಸ್ಮಿತ್ ಒಟ್ಟು 103 ಪಂದ್ಯಗಳನ್ನಾಡಿ 34.51ರ ಬ್ಯಾಟಿಂಗ್ ಸರಾಸರಿಯಲ್ಲಿ 2,485 ರನ್ ಬಾರಿಸಿದ್ದಾರೆ. ಸ್ಟೀವ್ ಸ್ಮಿತ್ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್ ಜತೆಯಾದರೆ ಆರ್‌ಸಿಬಿ ಮಧ್ಯಮ ಕ್ರಮಾಂಕದ ಸಮಸ್ಯೆಗೆ ಒಳ್ಳೆಯ ಪರಿಹಾರ ಸಿಕ್ಕಿದಂತಾಗುತ್ತದೆ. ಹಾಗೂ ವಿರಾಟ್ ಮೇಲಿನ ಒತ್ತಡ ಕೂಡಾ ಕಡಿಮೆಯಾಗಲಿದೆ.

3. ಕಡಿಮೆ ಬೆಲೆಗೆ ಉಪಯುಕ್ತ ಆಟಗಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಬಹುದು.

ಒಂದು ವೇಳೆ ಕಡಿಮೆ ಮೊತ್ತಕ್ಕೆ ಸ್ಟೀವ್ ಸ್ಮಿತ್‌ರನ್ನು ಆರ್‌ಸಿಬಿ ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಯಶಸ್ವಿಯಾದರೆ, ನಾಯಕನ ಆಯ್ಕೆ ಹಾಗೂ ಬ್ಯಾಟಿಂಗ್ ಆಯ್ಕೆಯಲ್ಲಿ ಬಲ ಬರಲಿದೆ. ಜತೆಗೆ ಉಳಿದ ಹಣದಲ್ಲಿ ಮತ್ತಷ್ಟು ಟಿ20 ಸ್ಪೆಷಲಿಸ್ಟ್ ಬ್ಯಾಟರ್‌ಗಳನ್ನು ಖರೀದಿಸಬಹುದಾಗಿದೆ.

click me!