ಆ್ಯಷಸ್ ಟೆಸ್ಟ್ ಸರಣಿಯನ್ನಾಡಲು ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಮರ್ಮಾಘಾತವಾಗಿದ್ದು, 2021-22ನೇ ಸಾಲಿನ ಪ್ರತಿಷ್ಠಿಯ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡವು 0-4 ಅಂತರದಲ್ಲಿ ಸೋಲು ಕಂಡು ಮುಖಭಂಗ ಅನುಭವಿಸಿದೆ. ಕ್ರಿಕೆಟ್ ಅಭಿಮಾನಿಗಳಿಂದ ವಿಮರ್ಶಕರವರೆಗೆ ಪ್ರತಿಯೊಬ್ಬರಿಂದಲೂ ಇಂಗ್ಲೆಂಡ್ ಕ್ರಿಕೆಟ್ ತಂಡದ ಹೀನಾಯ ಪ್ರದರ್ಶನಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಕ್ರಿಸ್ ಸಿಲ್ವರ್‌ವುಡ್ ಮಾರ್ಗದರ್ಶನದಲ್ಲಿ ಜೋ ರೂಟ್ ನೇತೃತ್ವದ ಇಂಗ್ಲೆಂಡ್ ತಂಡವು ಎಲ್ಲಾ 5 ಟೆಸ್ಟ್ ಪಂದ್ಯದಲ್ಲೂ ನೀರಸ ಪ್ರದರ್ಶನ ತೋರಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದೀಗ ಇಂಗ್ಲೆಂಡ್ ತಂಡದಲ್ಲಿ ಮೇಜರ್ ಸರ್ಜರಿಯಾಗಿದ್ದು, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ತನ್ನ ಹೆಡ್ ಕೋಚ್ ಕ್ರಿಸ್ ಸಿಲ್ವರ್‌ವುಡ್ ಅವರ ತಲೆದಂಡ ಪಡೆದಿದೆ.
ಇನ್ನುಳಿದಂತೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಡೈರೆಕ್ಟರ್ ಆಗಿದ್ದ ಆ್ಯಶ್ಲೆ ಗಿಲ್ಸ್ ಅವರನ್ನು ಸಹ ಇಸಿಬಿ ಪದಚ್ಯುತಿ ಮಾಡಿದೆ. ಇದೀಗ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಿರುವ ಇಂಗ್ಲೆಂಡ್ ತಂಡಕ್ಕೆ ಹಂಗಾಮಿ ಮ್ಯಾನೇಜರ್ ಆಗಿ ಆಂಡ್ರ್ಯೂ ಸ್ಟ್ರಾಸ್ ಅವರನ್ನು ನೇಮಕ ಮಾಡಲಾಗಿದೆ. ಇಂಗ್ಲೆಂಡ್ ತಂಡವು ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.
ಇಂಗ್ಲೆಂಡ್ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು, ನನ್ನ ಪಾಲಿಗೆ ದೊರೆತ ಅತಿದೊಡ್ಡ ಗೌರವ ಎಂದು ಭಾವಿಸುತ್ತೇನೆ. ನಮ್ಮ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯ ಜತೆ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಕ್ಕೆ ನನಗೆ ಹೆಮ್ಮೆಯಿದೆ. ನನ್ನ ಜತೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆಂದು ಕೋಚ್ ಹುದ್ದೆಯಿಂದ ಕೆಳಗಿಳಿದ ಕ್ರಿಸ್ ಸಿಲ್ವರ್‌ವುಡ್ ವಿದಾಯದ ಮಾತುಗಳನ್ನಾಡಿದ್ದಾರೆ.
ಇನ್ನು ಮುಂಬರುವ ದಿನಗಳಲ್ಲಿ ಇಸಿಬಿಯು ಇಂಗ್ಲೆಂಡ್ ತಂಡದಲ್ಲಿ ಮತ್ತಷ್ಟು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ತಂಡದ ಹೋಟೆಲ್ ರೂಂನೊಳಗೆ ಸಿಗರೇಟ್ ಹಚ್ಚಿಕೊಂಡು ರಾದ್ದಾಂತ ಮಾಡಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡದ ಸಹಾಯಕ ಕೋಚ್ ಗ್ರಾಹಂ ಥ್ರೋಫ್ ಅವರ ಹುದ್ದೆಯ ಅತಂತ್ರ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.