ಯುಎಇನಲ್ಲಿ ಅಕ್ಟೋಬರ್ 17ರಿಂದ ಅರ್ಹತಾ ಸುತ್ತಿನ ಟಿ20 ವಿಶ್ವಕಪ್ ಪಂದ್ಯಾವಳಿಗಳು ಆರಂಭವಾಗಲಿದ್ದು, ಅಕ್ಟೋಬರ್ 23ರಿಂದ ಸೂಪರ್ 12 ಪಂದ್ಯಗಳು ಆರಂಭವಾಗಲಿವೆ.
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಅಂದರೆ ಸೆಪ್ಟೆಂಬರ್ 24ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಮೊದಲ ಪಂದ್ಯವನ್ನು ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ
ಇದೆಲ್ಲದರ ನಡುವೆ ಟೀಂ ಇಂಡಿಯಾಗೆ ಆಯ್ಕೆಯಾಗಿರುವ ಆಟಗಾರರ ಪೈಕಿ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಬಹುತೇಕರು ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.
ಮತ್ತೊಂದೆಡೆ ತಂಡದ ಮೀಸಲು ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಶ್ರೇಯಸ್ ಅಯ್ಯರ್ ಐಪಿಎಲ್‌ನಲ್ಲಿ ಅಬ್ಬರಿಸುತ್ತಿದ್ದಾರೆ. ಹೀಗಾಗಿ ಮೀಸಲು ಆಟಗಾರನಾಗಿರುವ ಅಯ್ಯರ್ ಟೀಂ ಇಂಡಿಯಾ 15ರ ಬಳಗ ಕೂಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ
ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಹಾಗೂ ರಾಹುಲ್ ಚಹರ್ ಇನ್ನಷ್ಟೇ ತಮ್ಮ ಸಾಮಥ್ಯ ಸಾಬೀತುಪಡಿಸಬೇಕಿದೆ. ಇಶಾನ್ ಕಿಶನ್ ಭಾಗ-2ರಲ್ಲಿ ಆಡಿರುವ 3 ಪಂದ್ಯಗಳಲ್ಲಿ ಕ್ರಮವಾಗಿ 11, 14, 9 ರನ್ ಗಳಿಸಿದ್ದು, ಸೂರ್ಯಕುಮಾರ್ ಯಾದವ್ ಕ್ರಮವಾಗಿ 3, 5 ಮತ್ತು 8 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ.
ಇದಷ್ಟೇ ಅಲ್ಲದೇ ಲೆಗ್ ಸ್ಪಿನ್ನರ್ ರಾಹುಲ್ ಚಹರ್ 3 ಪಂದ್ಯಗಳಲ್ಲಿ ಕೇವಲ 1 ವಿಕೆಟ್ ಪಡೆದಿದ್ದಾರೆ. ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಬಗ್ಗೆ ಇನ್ನೂ ಸ್ಪಷ್ಟಚಿತ್ರಣ ಹೊರಬೀಳುತ್ತಿಲ್ಲ. ಹಾರ್ದಿಕ್ ಪಾಂಡ್ಯ ಕಳೆದ ಪಂದ್ಯದಲ್ಲಿ ಆರ್‌ಸಿಬಿ ಎದುರು ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರು.
ಹೀಗಾಗಿ, ಇಶಾನ್ ಕಿಶನ್‌ಗೆ ಕೊಕ್ ಕೊಟ್ಟು ಶ್ರೇಯಸ್ ಅಯ್ಯರ್‌ರನ್ನು ಮುಖ್ಯ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಪ್ರಕಟಿಸಿರುವ ವಿಶ್ವಕಪ್ ತಂಡದಲ್ಲಿ ಅಕ್ಟೋಬರ್ 10ಕ್ಕೂ ಮುನ್ನ ಬದಲಾವಣೆ ಮಾಡಲು ಅವಕಾಶವಿದೆ.