IPL 2021: ಮೂರು ವಿಕೆಟ್ ಕಬಳಿಸಿ ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ಹರ್ಷಲ್ ಪಟೇಲ್‌..!

First Published Oct 7, 2021, 11:56 AM IST

ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡಗಳ ನಡುವಿನ ಪಂದ್ಯದಲ್ಲಿ ಕೇನ್‌ ವಿಲಿಯಮ್ಸನ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು 4 ರನ್‌ಗಳ ರೋಚಕ ಜಯ ಸಾಧಿಸಿದೆ. ಬೌಲಿಂಗ್‌ನಲ್ಲಿ ಮಿಂಚಿನ ಪ್ರದರ್ಶನ ತೋರಿದ್ದ ಆರ್‌ಸಿಬಿ, ಬ್ಯಾಟಿಂಗ್‌ನಲ್ಲಿ ಕೊಂಚ ಯಡವಿದ್ದರಿಂದ ಪಂದ್ಯವನ್ನು ಕೈಚೆಲ್ಲಬೇಕಾಯಿತು. ಹೀಗಿದ್ದೂ ಆರ್‌ಸಿಬಿ ತಂಡದ ಡೆತ್ ಓವರ್ ಸ್ಪೆಷಲಿಸ್ಟ್ ಹರ್ಷಲ್ ಪಟೇಲ್‌ (Harshal Patel) ನಲ್ಲಿ ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸನ್‌ರೈಸರ್ಸ್‌ ಹೈದರಾಬಾದ್‌ ಹರ್ಷಲ್ ಪಟೇಲ್‌(3). ಡೇನಿಯಲ್ ಕ್ರಿಶ್ಚಿಯನ್(2) ಮಾರಕ ದಾಳಿಗೆ ತತ್ತರಿಸಿ 7 ವಿಕೆಟ್ ಕಳೆದುಕೊಂಡು 141 ರನ್ ಕಲೆ ಹಾಕಿತು.

ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡಿಕ್ಕಲ್‌(41) ಹಾಗೂ ಮ್ಯಾಕ್ಸ್‌ವೆಲ್(40) ಸಮಯೋಚಿತ ಬ್ಯಾಟಿಂಗ್ ಹೊರತಾಗಿಯೂ 4 ರನ್‌ಗಳ ವಿರೋಚಿತ ಸೋಲು ಕಂಡಿತು.

ಆರ್‌ಸಿಬಿ ಈ ಪಂದ್ಯದಲ್ಲಿ ಸೋಲಿನ ಹೊರತಾಗಿಯೂ, ಹಾಲಿ ಪರ್ಪಲ್ ಕ್ಯಾಪ್ ಒಡೆಯ ಹರ್ಷಲ್ ಪಟೇಲ್‌ ಐಪಿಎಲ್‌ ಇತಿಹಾಸದಲ್ಲೇ ಹೊಸದೊಂದು ದಾಖಲೆಗೆ ಪಾತ್ರರಾಗಿದ್ದಾರೆ.

ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್‌ ಹರ್ಷಲ್‌ ಪಟೇಲ್‌ ಐಪಿಎಲ್‌ ಆವೃತ್ತಿಯೊಂದರಲ್ಲಿ ಗರಿಷ್ಠ ವಿಕೆಟ್‌ ಪಡೆದ ಭಾರತೀಯ ಬೌಲರ್‌ ಎನ್ನುವ ದಾಖಲೆ ಬರೆದಿದ್ದಾರೆ. 
 

ಬುಧವಾರ ಸನ್‌ರೈಸ​ರ್ಸ್‌ ಹೈದರಾಬಾದ್‌ ವಿರುದ್ಧ ನಡೆದ ಪಂದ್ಯದಲ್ಲಿ 3 ವಿಕೆಟ್‌ ಕಬಳಿಸಿದ ಹರ್ಷಲ್ ಪಟೇಲ್‌‌, ಈ ಆವೃತ್ತಿಯಲ್ಲಿ ತಮ್ಮ ವಿಕೆಟ್‌ಗಳ ಸಂಖ್ಯೆಯನ್ನು 29ಕ್ಕೆ ಏರಿಸಿಕೊಂಡರು. 

Photo- iplt20.com

ಇದರೊಂದಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರಿನಲ್ಲಿದ್ದ 28 ವಿಕೆಟ್‌ಗಳ ದಾಖಲೆಯನ್ನು ಮುರಿದರು. ಮುಂಬೈ ಇಂಡಿಯನ್ಸ್‌ನ ವೇಗಿ ಬೂಮ್ರಾ, 2020ರಲ್ಲಿ 28 ವಿಕೆಟ್‌ ಕಬಳಿಸಿದ್ದರು. ಅವರಿಗೂ ಮೊದಲು 2017ರಲ್ಲಿ ಸನ್‌ರೈಸ​ರ್ಸ್‌ ಹೈದರಾಬಾದ್ ತಂಡದ ವೇಗಿ ಭುವನೇಶ್ವರ್‌ ಕುಮಾರ್‌ 27 ವಿಕೆಟ್‌ ಕಬಳಿಸಿದ್ದರು.

ಈ ವರ್ಷ 13 ಪಂದ್ಯಗಳಲ್ಲಿ ಹರ್ಷಲ್‌ 29 ವಿಕೆಟ್‌ ಕಬಳಿಸಿದ್ದು, ಆವೃತ್ತಿಯೊಂದರಲ್ಲಿ ಗರಿಷ್ಠ ವಿಕೆಟ್‌ ಪಡೆದ ಬೌಲರ್‌ ಎನ್ನುವ ದಾಖಲೆ ಬರೆಯಲು ಇನ್ನು ಕೇವಲ 4 ವಿಕೆಟ್‌ ಬೇಕಿದೆ. 

2013ರಲ್ಲಿ ಚೆನ್ನೈನ ಡ್ವೇನ್‌ ಬ್ರಾವೋ 18 ಪಂದ್ಯಗಳಲ್ಲಿ 32 ವಿಕೆಟ್‌ ಕಿತ್ತಿದ್ದರು. 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಕಗಿಸೋ ರಬಾಡ 30 ವಿಕೆಟ್‌ ಕಬಳಿಸಿ 2ನೇ ಸ್ಥಾನದಲ್ಲಿದ್ದಾರೆ.

click me!