IPL 2021 RCB ತಂಡದ ಪರ ಅಪರೂಪದ ದಾಖಲೆ ಬರೆದ ಹರ್ಷಲ್‌ ಪಟೇಲ್..!

First Published | Sep 30, 2021, 12:06 PM IST

ದುಬೈ: ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನವನ್ನು ಮುಂದುವರೆಸಿದ್ದು, ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಪ್ಲೇ-ಆಫ್‌ಗೇರುವ ನೆಚ್ಚಿನ ತಂಡಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಆರ್‌ಸಿಬಿ ತಂಡ ಬೌಲಿಂಗ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರುತ್ತಿದೆ. ರಾಜಸ್ಥಾನ ರಾಯಲ್ಸ್‌ ವಿರುದ್ದದ ಪಂದ್ಯದಲ್ಲಿ ಆರ್‌ಸಿಬಿ ವೇಗಿ ಹರ್ಷಲ್ ಪಟೇಲ್ ಅಪರೂಪದ ದಾಖಲೆ ಬರೆದಿದ್ದಾರೆ. ಏನದು ದಾಖಲೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ. 
 

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ 43ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ದ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು 7 ವಿಕೆಟ್‌ಗಳ ಜಯ ಸಾಧಿಸಿದೆ.

ಆಲ್ರೌಂಡ್ ಪ್ರದರ್ಶನ ತೋರಿದ ವಿರಾಟ್ ಪಡೆ ಗೆಲುವಿನೊಂದಿಗೆ 14 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಆರ್‌ಸಿಬಿ 3ನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದು, ಪ್ಲೇ ಆಫ್‌ಗೆ ಮತ್ತಷ್ಟು ಹತ್ತಿರವಾಗಿದೆ
 

Latest Videos


ರಾಜಸ್ಥಾನ ರಾಯಲ್ಸ್‌ ವಿರುದ್ದ ಮತ್ತೊಮ್ಮೆ ಮಿಂಚಿನ ಪ್ರದರ್ಶನ ತೋರಿದ ಪರ್ಪಲ್‌ ಕ್ಯಾಪ್‌ ಒಡೆಯ ಹರ್ಷಲ್‌ ಪಟೇಲ್‌ ಒಂದೇ ಓವರ್‌ನಲ್ಲಿ ಮತ್ತೆ 3 ವಿಕೆಟ್‌ ಕಬಳಿಸುವ ಮೂಲಕ ಈ ಆವೃತ್ತಿಯಲ್ಲೇ 26 ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 

ಮುಂಬೈ ಇಂಡಿಯನ್ಸ್ ವಿರುದ್ದ ಪಂದ್ಯದಲ್ಲಿ ಹರ್ಷಲ್‌ ಪಟೇಲ್‌ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಇದರೊಂದಿಗೆ ಆರ್‌ಸಿಬಿ ಪರ ಹ್ಯಾಟ್ರಿಕ್‌ ವಿಕೆಟ್ ಕಬಳಿಸಿದ ಮೂರನೇ ಬೌಲರ್ ಎನಿಸಿಕೊಂಡಿದ್ದರು. ಇನ್ನು ರಾಯಲ್ಸ್‌ ವಿರುದ್ದದ ಪಂದ್ಯದಲ್ಲೂ ಸತತ 2 ವಿಕೆಟ್ ಕಬಳಿಸಿದರಾದರೂ ಹ್ಯಾಟ್ರಿಕ್‌ ವಿಕೆಟ್ ಕಬಳಿಸಲು ಸಾಧ್ಯವಾಗಲಿಲ್ಲ
 

ಇದರೊಂದಿಗೆ ಐಪಿಎಲ್‌ ಆವೃತ್ತಿಯೊಂದರಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಆರ್‌ಸಿಬಿಯ ಬೌಲರ್‌ ಎನ್ನುವ ದಾಖಲೆಯನ್ನು ಹರ್ಷಲ್‌ ಪಟೇಲ್‌ ಬರೆದಿದ್ದಾರೆ. ಈ ಋುತುವಿನಲ್ಲಿ ಒಟ್ಟು ವಿಕೆಟ್‌ ಗಳಿಕೆಯನ್ನು 26ಕ್ಕೆ ಹೆಚ್ಚಿಸಿಕೊಂಡಿದ್ದಾರೆ. 

ಈ ಮೊದಲು 2015ರ ಇಂಡಿಯನ್ ಪ್ರೀಮಿಯರ್‌ ಲೀಗ್ ಟೂರ್ನಿಯಲ್ಲಿ 15 ಪಂದ್ಯಗಳಲ್ಲಿ ಲೆಗ್‌ ಸ್ಪಿನ್ನರ್‌ ಯುಜುವೇಂದ್ರ ಚಹಲ್‌ 23 ವಿಕೆಟ್‌ ಕಬಳಿಸಿದ್ದೇ ಆರ್‌ಸಿಬಿ ಪರ ಗರಿಷ್ಠ ಎನಿಸಿತ್ತು. 

ಇನ್ನು ಐಪಿಎಲ್‌ ಆವೃತ್ತಿಯೊಂದರಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎನ್ನುವ ದಾಖಲೆ ಡ್ವೇನ್‌ ಬ್ರಾವೋ ಹೆಸರಲ್ಲಿದೆ. 2013ರಲ್ಲಿ ಬ್ರಾವೋ ಚೆನ್ನೈ ಸೂಪರ್‌ ಕಿಂಗ್ಸ್‌ ಪರ 18 ಪಂದ್ಯಗಳಲ್ಲಿ 32 ವಿಕೆಟ್‌ ಕಬಳಿಸಿದ್ದರು.

ಇದೀಗ ಹರ್ಷಲ್‌ ಪಟೇಲ್‌ ವಿಕೆಟ್‌ ಕಬಳಿಸುತ್ತಿರುವ ವೇಗವನ್ನು ಗಮನಿಸಿದರೆ ಇನ್ನು ಕೆಲವೇ ದಿನಗಳಲ್ಲಿ ಡ್ವೇನ್‌ ಬ್ರಾವೋ ದಾಖಲೆ ಧೂಳೀಪಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಬ್ರಾವೋ ದಾಖಲೆ ಸರಿಗಟ್ಟಲು ಹರ್ಷಲ್‌ ಪಟೇಲ್‌ಗೆ ಇನ್ನು ಕೇವಲ 6 ವಿಕೆಟ್ ಅವಶ್ಯಕತೆಯಿದೆ.

ಆರ್‌ಸಿಬಿ ಸದ್ಯ 11 ಪಂದ್ಯಗಳನ್ನಾಡಿದ್ದು, ಇನ್ನೂ ಲೀಗ್‌ ಹಂತದಲ್ಲೇ ಮೂರು ಪಂದ್ಯಗಳು ಬಾಕಿ ಇವೆ. ಇನ್ನು ಪ್ಲೇ ಆಫ್‌ ಪಂದ್ಯವನ್ನು ಆರ್‌ಸಿಬಿ ಆಡುವುದು ಬಹುತೇಕ ಖಚಿತ ಎನಿಸಿದ್ದು, ಪ್ರತಿ ಪಂದ್ಯದಲ್ಲಿ ಕನಿಷ್ಠ 2 ವಿಕೆಟ್ ಕಬಳಿಸಿದರೂ ಐಪಿಎಲ್‌ನ ವಿಶಿಷ್ಠ ದಾಖಲೆ 'ಪರ್ಪಲ್‌ ಪಟೇಲ್‌' ಪಾಲಾಗಲಿದೆ.

click me!