ಮೂರು ಬಾರಿಯ ಐಪಿಎಲ್(IPL) ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶಾರ್ಜಾ ಮೈದಾನದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ ಸೆಣಸಾಟ ನಡೆಸಲಿದೆ. ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.
ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಇಬ್ಬರು ದಿಗ್ಗಜ ನಾಯಕರ ನಡುವಿನ ಪೈಪೋಟಿ ಸಾಕಷ್ಟು ಕುತೂಹಲವನ್ನು ಮೂಡಿಸಿದ್ದು, ಒಂದು ರೀತಿಯ ಜಿದ್ದಾಜಿದ್ದಿನ ಪೈಪೋಟಿಯನ್ನು ನಿರೀಕ್ಷಿಸಲಾಗಿದೆ.
ಇಂದಿನ ಪಂದ್ಯವನ್ನು ಗೆಲ್ಲೋರು ಯಾರು ಎನ್ನುವ ಕುತೂಹಲ ಜೋರಾಗಿರುವ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ಆರ್‌ಸಿಬಿ ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲುವು ದಾಖಲಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
RCB vs CSK ನಡುವಿನ ಪಂದ್ಯಕ್ಕೂ ಮುನ್ನ ವಿಡಿಯೋ ವಿಶ್ಲೇಷಣೆ ಮಾಡಿರುವ ಮಂಜ್ರೇಕರ್, ಕಳೆದ ಪಂದ್ಯಗಳಲ್ಲಿನ ಹೋರಾಟಗಳನ್ನು ಗಮನಿಸಿದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆರ್‌ಸಿಬಿ ವಿರುದ್ದ ಮೇಲುಗೈ ಸಾಧಿಸಲಿದೆ ಎಂದಿದ್ದಾರೆ.
ಐಪಿಎಲ್‌ನ ಎರಡು ಬಲಿಷ್ಠ ತಂಡಗಳಾದ RCB vs CSK ತಂಡಗಳು ಮುಖಾಮುಖಿಯಾಗುತ್ತಿದ್ದು, ಇಂದಿನ ಪಂದ್ಯವು ಸಾಕಷ್ಟು ಪೈಪೋಟಿಯಿಂದ ಕೂಡಿರುವ ನಿರೀಕ್ಷೆಯಿದೆ. ಚೆನ್ನೈನಲ್ಲಿ ಕೆಳಹಂತದವರೆಗೂ ಒಳ್ಳೆಯ ಬ್ಯಾಟಿಂಗ್ ಕ್ರಮಾಂಕವಿದೆ ಹಾಗೂ ಬೌಲಿಂಗ್‌ನಲ್ಲೂ ಸಾಕಷ್ಟು ಉತ್ತಮ ಆಯ್ಕೆಗಳಿವೆ. ಹೀಗಾಗಿ ಆರ್‌ಸಿಬಿ ಎದುರು ಚೆನ್ನೈ ಗೆಲ್ಲಬಹುದು ಎಂದು ಮಂಜ್ರೇಕರ್ ಭವಿಷ್ಯ ನುಡಿದ್ದಾರೆ.
ಆರ್‌ಸಿಬಿ ತಂಡವು ಈಗಲೂ ಸಹಾ ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಮಾತ್ರ ಹೆಚ್ಚಾಗಿ ನೆಚ್ಚಿಕೊಂಡಿದೆ. ಇದೇ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳ ನಡುವಿನ ವ್ಯತ್ಯಾಸ ಎಂದು ಮಂಜ್ರೇಕರ್ ಹೇಳಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಒಟ್ಟಾರೆ 28 ಬಾರಿ ಮುಖಾಮುಖಿಯಾಗಿದ್ದು, ಸಿಎಸ್‌ಕೆ ತಂಡವು 18 ಬಾರಿ ಗೆಲುವು ದಾಖಲಿಸಿದ್ದರೆ, ಆರ್‌ಸಿಬಿ ತಂಡವು 9 ಬಾರಿ ಗೆಲುವಿನ ಸಿಹಿಯುಂಡಿದೆ. ಇನ್ನೊಂದು ಪಂದ್ಯದಲ್ಲಿ ಯಾವುದೇ ಫಲಿತಾಂಶ ಹೊರಬಿದ್ದಿರಲಿಲ್ಲ.
ಸದ್ಯ ಅಂಕಪಟ್ಟಿಯಲ್ಲಿ ಚೆನ್ನೈ ಹಾಗೂ ಬೆಂಗಳೂರು ತಂಡಗಳು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದು, ಫ್ಲೇ ಸ್ಥಾನ ಖಚಿತಪಡಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿವೆ. ಹೀಗಾಗಿ ಇಂದಿನ ಪಂದ್ಯ ಗೆಲ್ಲೋರು ಯಾರು ಎನ್ನುವುದಕ್ಕೆ ಕಾಲವೇ ಉತ್ತರ ನೀಡಬೇಕಿದೆ.