ರಿಷಭ್ ಪಂತ್ ನಿಂದ ಆರ್ಚರ್‌ವರೆಗೆ: ಈ ಸ್ಟಾರ್ ಕ್ರಿಕೆಟಿಗರು ಏಕದಿನ ವಿಶ್ವಕಪ್ ಆಡೋದು ಡೌಟ್..!

First Published Jul 9, 2023, 5:09 PM IST

ಬೆಂಗಳೂರು: ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. 10 ತಂಡಗಳು ಏಕದಿನ ವಿಶ್ವಕಪ್ ಟೂರ್ನಿಗಾಗಿ ಸೆಣಸಾಡಲಿವೆ. ಭಾರತದಲ್ಲಿ ನಡೆಯಲಿರುವ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಯಾವೆಲ್ಲಾ ಸ್ಟಾರ್ ಆಟಗಾರರು ಈ ಟೂರ್ನಿಯನ್ನು ಮಿಸ್ ಮಾಡಿಕೊಳ್ಳಲಿದ್ದಾರೆ ಎನ್ನುವುದರ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.
 

2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಿದೆ. ಅಕ್ಟೋಬರ್ 05ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟೂರ್ನಿಗೆ ಚಾಲನೆ ಸಿಗಲಿದ್ದು, ಫೈನಲ್ ಪಂದ್ಯವು ಇದೇ ಮೈದಾನದಲ್ಲಿ ನವೆಂಬರ್‌ 19ರಂದು ನಡೆಯಲಿದೆ.

ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಹಾಲಿ ಚಾಂಪಿಯನ್‌ ಇಂಗ್ಲೆಂಡ್ ಸೇರಿದಂತೆ 10 ತಂಡಗಳು ಕಣಕ್ಕಿಳಿಯುತ್ತಿದ್ದು, ಭಾರತದ 10 ಸ್ಟೇಡಿಯಂಗಳಲ್ಲಿ ಹೈವೋಲ್ಟೇಜ್‌ ಪಂದ್ಯಗಳಿಗೆ ವೇದಿಕೆ ಒದಗಿಸಲಿದೆ
 

ಕೆಲವು ತಂಡಗಳಿಗೆ ಗಾಯದ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಹೀಗಾಗಿ ಭಾರತ, ಇಂಗ್ಲೆಂಡ್‌, ಸೇರಿದಂತೆ ಪ್ರಮುಖ ತಂಡಗಳ ಆಟಗಾರರು  2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎನಿಸಿದೆ.
 

ತಮೀಮ್ ಇಕ್ಬಾಲ್‌ ಬಗ್ಗೆ ಖಚಿತತೆ ಇಲ್ಲ

ಬಾಂಗ್ಲಾದೇಶ ಏಕದಿನ ತಂಡದ ನಾಯಕ ತಮೀಮ್ ಇಕ್ಬಾಲ್ ದಿಢೀರ್ ರಾಜೀನಾಮೆ ನೀಡಿ ಅಷ್ಟೇ ವೇಗವಾಗಿ ರಾಜಿನಾಮೆ ವಾಪಾಸ್ ಪಡೆದಿದ್ದಾರೆ. ಒಂದುವರೆ ತಿಂಗಳು ವಿಶ್ರಾಂತಿ ಪಡೆದು ತಂಡಕ್ಕೆ ಕಮ್‌ಬ್ಯಾಕ್ ಮಾಡುವುದಾಗಿ ತಮೀಮ್ ಇಕ್ಬಾಲ್ ಹೇಳಿದ್ದರೂ ಸಹಾ, ಸಂಪೂರ್ಣ ಫಿಟ್ ಆಗಿಲ್ಲದೇ ಹೋದರೆ, ಏಕದಿನ ವಿಶ್ವಕಪ್ ಆಡೋದು ಅನುಮಾನ ಎನಿಸಿದೆ.

ಅಪಘಾತದ ಬಳಿಕ ಚೇತರಿಸಿಕೊಳ್ಳುತ್ತಿರುವ ರಿಷಭ್‌ ಪಂತ್

ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಕಳೆದ ವರ್ಷದ ಕೊನೆಯಲ್ಲಿ ಭೀಕರ ಕಾರು ಅಪಘಾತಕ್ಕೆ ಒಳಗಾಗಿದ್ದರು. ಕೆಲವು ಶಸ್ತ್ರಚಿಕಿತ್ಸೆಯ ಬಳಿಕ ಪಂತ್ ಚೇತರಿಸಿಕೊಳ್ಳುತ್ತಿದ್ದಾರಾದರೂ, ಏಕದಿನ ವಿಶ್ವಕಪ್ ಆಡೋದು ಡೌಟ್. ಡೆಲ್ಲಿ ಕ್ರಿಕೆಟ್‌ ಸಂಸ್ಥೆಯ ಡೈರೆಕ್ಟರ್ ಶ್ಯಾಮ್ ಶರ್ಮಾ ಪ್ರಕಾರ, ಪಂತ್, ಏಕದಿನ ವಿಶ್ವಕಪ್ ಬಳಿಕ ಭಾರತ ತಂಡ ಕೂಡಿಕೊಳ್ಳಬಹುದು ಎಂದಿದ್ದಾರೆ.

ಜೋಫ್ರಾ ಆರ್ಚರ್ ಕೂಡಾ ಅನುಮಾನ:

2019ರ ಇಂಗ್ಲೆಂಡ್ ವಿಶ್ವಕಪ್ ಹೀರೋ ಜೋಫ್ರಾ ಆರ್ಚರ್ ಕೂಡಾ ಕಳೆದ ಕೆಲ ಸಮಯದಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಬಲ ಮೊಣಕೈ ನೋವಿನಿಂದ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಏಕದಿನ ವಿಶ್ವಕಪ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಇರುವುದರಿಂದ ವಿಶ್ವಕಪ್‌ ಟೂರ್ನಿಯಲ್ಲಿ ಆರ್ಚರ್‌ ಸೇವೆ ಇಂಗ್ಲೆಂಡ್‌ಗೆ ಸಿಗುವುದು ಡೌಟ್.
 

ಕೂಲ್ ಕ್ಯಾಪ್ಟನ್‌ ಕೇನ್ ವಿಲಿಯಮ್ಸನ್ ಕೂಡಾ ಡೌಟ್:

2023ನೇ ಸಾಲಿನ ಐಪಿಎಲ್ ಟೂರ್ನಿಯ ವೇಳೆ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮೊಣಕಾಲು ಗಾಯಕ್ಕೆ ಒಳಗಾಗಿದ್ದಾರೆ. ಕೇನ್‌ ವಿಲಿಯಮ್ಸನ್‌ ಸಂಪೂರ್ಣ ಗುಣಮುಖರಾಗಲು 6 ತಿಂಗಳು ಅವಶ್ಯಕತೆಯಿದ್ದು, ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸುವುದು ಬಹುತೇಕ ಅನುಮಾನ ಎನಿಸಿದೆ.
 

click me!