ಆಸ್ಟ್ರೇಲಿಯಾದಲ್ಲಿ ಆರಂಭವಾಗಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ಒಟ್ಟು ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಚುಟುಕು ಕ್ರಿಕೆಟ್ ವಿಶ್ವಕಪ್ ಮೇಲೆ ಕಣ್ಣಿಟ್ಟಿವೆ.
ಮೊದಲಿಗೆ ಅರ್ಹತಾ ಸುತ್ತಿನ ಪಂದ್ಯಗಳು ಜರುಗುತ್ತಿದ್ದು, ಅಕ್ಟೋಬರ್ 22ರಿಂದ ಸೂಪರ್ 12 ಹಂತದ ಪಂದ್ಯಗಳ ಆರಂಭವಾಗಲಿವೆ. ಹೀಗಿರುವಾಗಲೇ ಈ ಬಾರಿ ಟ್ರೋಫಿ ಗೆಲ್ಲಬಲ್ಲ ತಂಡಗಳು ಯಾವುವು ಎನ್ನುವ ಬಿಸಿಬಿಸಿ ಚರ್ಚೆ ಜೋರಾಗಿದೆ.
ಇದೀಗ ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಟಿ20 ವಿಶ್ವಕಪ್ ಟ್ರೋಫಿ ಎತ್ತಿಹಿಡಿಯುವುದನ್ನು ನೋಡಲು ಕಾತರದಿಂದ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
ಈ ಬಾರಿ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಜಯಗಳಿಸಲಿದೆ. ಸೆಮಿಫೈನಲ್‌ಗೂ ಭಾರತ ಪ್ರವೇಶಿಸಲಿದೆ ಎಂದು ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಭವಿಷ್ಯ ನುಡಿದಿದ್ದಾರೆ.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, 23ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಮೆಲ್ಬೊರ್ನ್ ಕ್ರಿಕೆಟ್ ಮೈದಾನ ಸಾಕ್ಷಿಯಾಗಲಿದೆ.
‘ಪಾಕ್ ವಿರುದ್ಧ ಭಾರತ ಗೆಲ್ಲುವ ಫೇವರಿಟ್. ನನ್ನ ಹೃದಯ ಯಾವತ್ತೂ ಭಾರತದ ಜೊತೆಗಿದೆ ಮತ್ತು ಭಾರತ ಗೆಲ್ಲಬೇಕೆಂದು ಆಶಿಸುತ್ತೇನೆ. ನಾನು ಭಾರತೀಯ ಎಂಬ ಕಾರಣಕ್ಕೆ ಮಾತ್ರವಲ್ಲ. ನಿಜಕ್ಕೂ ಭಾರತ ಈ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡ. ತಂಡ ಸಮತೋಲನಿಂದ ಕೂಡಿದ್ದು, ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡಲಿದೆ ಎಂದಿದ್ದಾರೆ.
ಭಾರತದ ಜೊತೆ ಪಾಕಿಸ್ತಾನ, ಆಸ್ಪ್ರೇಲಿಯಾ, ಇಂಗ್ಲೆಂಡ್ ಕೂಡಾ ಸೆಮೀಸ್‌ಗೇರಲಿದೆ ಎಂದಿರುವ ಅವರು, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಡಾರ್ಕ್‌ಹಾರ್ಸ್‌ಗಳು ಎಂದು ಸಚಿನ್ ತೆಂಡುಲ್ಕರ್ ಅಭಿಪ್ರಾಯಪಟ್ಟಿದ್ದಾರೆ.