ಮೊಹಮ್ಮದ್ ಶಮಿಗೆ ಕೇವಲ ಒಂದೇ ಓವರ್‌ ನೀಡಿದ್ದೇಕೆ..? ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ರೋಹಿತ್ ಶರ್ಮಾ

First Published Oct 17, 2022, 4:26 PM IST

ಬ್ರಿಸ್ಬೇನ್‌(ಅ.17): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 6 ರನ್‌ಗಳ ರೋಚಕ ಜಯ ಸಾಧಿಸಿದೆ. ಅಭ್ಯಾಸ ಪಂದ್ಯವಾದರೂ ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಕೊನೆಗೂ ಟೀಂ ಇಂಡಿಯಾ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಅನುಭವಿ ವೇಗಿ ಮೊಹಮ್ಮದ್ ಶಮಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. ಶಮಿಗೆ ಕೊನೆಯ ಓವರ್ ಬೌಲಿಂಗ್ ನೀಡಿದ್ದೇಕೆ ಎನ್ನುವ ಪ್ರಶ್ನೆಗೆ ರೋಹಿತ್ ಶರ್ಮಾ ಇಂಟ್ರೆಸ್ಟಿಂಗ್ ಉತ್ತರ ನೀಡಿ ಗಮನ ಸೆಳೆದಿದ್ದಾರೆ.
 

ಜಸ್ಪ್ರೀತ್ ಬುಮ್ರಾ, ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದರಿಂದ ಅನುಭವಿ ವೇಗಿ ಮೊಹಮ್ಮದ್ ಶಮಿ ಕೊನೆಯ ಕ್ಷಣದಲ್ಲಿ ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಕೂಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ಇದೀಗ ಆಸ್ಟ್ರೇಲಿಯಾ ಎದುರಿನ ಮೊದಲ ಅಭ್ಯಾಸ ಪಂದ್ಯದಲ್ಲಿ ಕೊನೆಯ ಓವರ್‌ ಬೌಲಿಂಗ್ ಮಾಡುವ ಜವಾಬ್ದಾರಿ ಹೊತ್ತು ಅನುಭವಿ ವೇಗಿ ಶಮಿ, 11 ರನ್‌ಗಳ ಸವಾಲನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗುವ ಮೂಲಕ ತಾವೆಷ್ಟು ಉಪಯುಕ್ತ ಡೆತ್ ಓವರ್‌ ಸ್ಪೆಷಲಿಸ್ಟ್ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. 

ಭಾರತ ನೀಡಿದ್ದ 187 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಆತಿಥೇಯ ಆಸ್ಟ್ರೇಲಿಯಾ ತಂಡವು ಕೊನೆಯ ಓವರ್‌ನಲ್ಲಿ ಗೆಲ್ಲಲು 11 ರನ್‌ಗಳ ಅಗತ್ಯವಿತ್ತು. ಆದರೆ ಶಮಿ ಕೇವಲ 4 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. 

ಮೊದಲ ಎರಡು ಎಸೆತಗಳಲ್ಲಿ ತಲಾ 2 ರನ್ ನೀಡಿದರು. ಇನ್ನು ಮೂರನೇ ಎಸೆತದಲ್ಲಿ ಪ್ಯಾಟ್ ಕಮಿನ್ಸ್ ಬಲಿ ಪಡೆದರು. ನಾಲ್ಕನೇ ಎಸೆತದಲ್ಲಿ ಆಸ್ಟನ್ ಏಗರ್ ರನೌಟ್‌ಗೆ ಬಲಿಯಾದರೆ, ಐದು ಹಾಗೂ ಆರನೇ ಎಸೆತದಲ್ಲಿ ಜೊಶ್ ಇಂಗ್ಲಿಶ್ ಹಾಗೂ ಕೇನ್ ರಿಚರ್ಡ್‌ಸನ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಕಳೆದೊಂದು ವರ್ಷದಿಂದ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡದ ಶಮಿ, ಆಸ್ಟ್ರೇಲಿಯಾ ವಿರುದ್ದ, ಅದು ಕೊನೆಯ ಓವರ್‌ನಲ್ಲಿ ಬೌಲಿಂಗ್‌ ತಾವೆಷ್ಟು ಉಪಯುಕ್ತ ಬೌಲರ್ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಇದೇ ವೇಳೆ ಶಮಿಗೆ ಕೊನೆಯ ಓವರ್ ಬೌಲಿಂಗ್ ಮಾಡಲು ಅವಕಾಶ ನೀಡಿದ್ದೇಕೆ ಎನ್ನುವ ಪ್ರಶ್ನೆಗೆ ರೋಹಿತ್ ಶರ್ಮಾ ಉತ್ತರ ನೀಡಿದ್ದಾರೆ.
 

ಅವರು(ಶಮಿ) ದೀರ್ಘ ಸಮಯದ ಬಳಿಕ ತಂಡ ಕೂಡಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಒಂದು ಓವರ್‌ ಬೌಲಿಂಗ್ ಮಾಡಲು ಅವಕಾಶ ನೀಡಿದೆವು. ಇದರ ಕೊನೆಯ ಓವರ್ ಬೌಲಿಂಗ್ ಮಾಡುವ ಚಾಲೆಂಜ್‌ ಅವರನ್ನು ಅವರಿಗೆ ನೀಡಿದೆವು. ನೀವೇ ನೋಡಿದ್ರಲ್ಲ ಅವರು ಏನು ಮಾಡಿರೆಂದು ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಇದೀಗ ಬುಮ್ರಾ, ಅನುಪಸ್ಥಿತಿಯಲ್ಲಿ ಮೊಹಮ್ಮದ್ ಶಮಿ, ಟೀಂ ಇಂಡಿಯಾ ವೇಗದ ಬೌಲಿಂಗ್ ಸಾರಥ್ಯ ವಹಿಸಲಿದ್ದು, ತಂಡ ಅವರಿಂದ ಜವಾಬ್ದಾರಿಯುತ ಪ್ರದರ್ಶನವನ್ನು ನಿರೀಕ್ಷೆ ಮಾಡುತ್ತಿದೆ. 

click me!