ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡವು 10 ವಿಕೆಟ್‌ಗಳ ಅಂತರದ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿತ್ತು.
ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ಶಾಹೀನ್ ಅಫ್ರಿದಿ ಮಾರಕ ದಾಳಿಗೆ ತತ್ತರಿಸಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 151 ರನ್ ಬಾರಿಸಿತ್ತು. ಈ ಗುರಿಯನ್ನು ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ ಆಕರ್ಷಕ ಜತೆಯಾಟವಾಡುವ ತಂಡಕ್ಕೆ ಗೆಲುವು ತಂದುಕೊಟ್ಟಿತ್ತು.
ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ತಂಡವು ಮೊದಲ ಬಾರಿಗೆ ಭಾರತದ ಎದುರು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಆ ಗೆಲುವಿನ ಕುರಿತಂತೆ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಪ್ರತಿಕ್ರಿಯಿಸಿದ್ದಾರೆ.
ನನ್ನ ಪ್ರಕಾರ ಪಂದ್ಯ ಆರಂಭಕ್ಕೆ ಮುನ್ನವೇ ಭಾರತೀಯರು ಹೆದರಿದ್ದರು ಎಂದೆನಿಸುತ್ತಿದೆ. ಅವರ ಬಾಡಿ ಲಾಂಗ್ವೆಜ್ ಸೂಕ್ಷ್ಮವಾಗಿ ಗಮನಿಸಿದ್ದರೇ ಅರ್ಥವಾಗುತ್ತಿತ್ತು. ಟಾಸ್ ವೇಳೆ ವಿರಾಟ್ ಕೊಹ್ಲಿ ಹಾಗೂ ಬಾಬರ್ ಅಜಂ ಅವರ ಬಾಡಿ ಲಾಂಗ್ವೇಜ್ ನೋಡಿದರೆ ಅರ್ಥವಾಗುತ್ತಿತ್ತು ಎಂದು ಇಂಜಮಾಮ್ ಹೇಳಿದ್ದಾರೆ
ಭಾರತೀಯರ ಬಾಡಿ ಲಾಂಗ್ವೇಜ್‌ಗಿಂತ ನಮ್ಮ ಹುಡುಗರ ಬಾಡಿ ಲಾಂಗ್ವೇಜ್ ಉತ್ತಮವಾಗಿತ್ತು. ಸ್ವತಃ ರೋಹಿತ್ ಶರ್ಮಾ ಒತ್ತಡಕ್ಕೆ ಒಳಗಾಗಿದ್ದರು. ಇದನ್ನು ಗಮನಿಸಿದರೇ ಇಡೀ ತಂಡವೇ ಒತ್ತಡಕ್ಕೆ ಒಳಗಾಗಿತ್ತು ಎನ್ನುವುದು ಅರ್ಥವಾಗುತ್ತದೆ ಎಂದು ಪಾಕ್ ಮಾಜಿ ನಾಯಕ ಅಭಿಪ್ರಾಯಪಟ್ಟಿದ್ದಾರೆ.
ಆರಂಭದಲ್ಲೇ ರೋಹಿತ್ ಶರ್ಮಾ ಹಾಗೂ ಕೆ.ಎಲ್. ರಾಹುಲ್ ವಿಕೆಟ್ ಪತನದ ಬಳಿಕ ಪಾಕಿಸ್ತಾನ ತಂಡವು ಭಾರತದ ಮೇಲೆ ಒತ್ತಡ ಹೇರುವ ಮೂಲಕ ಪಂದ್ಯದಲ್ಲಿ ಪ್ರಾಬಲ್ಯ ಮೆರೆಯಿತು. ಭಾರತದ ಒತ್ತಡದ ಪರಿಸ್ಥಿತಿ ಪಾಕಿಸ್ತಾನಕ್ಕೆ ಲಾಭವಾಯಿತು ಎಂದಿದ್ದಾರೆ.
ಕಳೆದ ಎರಡು-ಮೂರು ವರ್ಷಗಳಲ್ಲಿ ಟೀಂ ಇಂಡಿಯಾ ಪ್ರದರ್ಶನವನ್ನು ಗಮನಿಸಿದರೇ, ಭಾರತ ನಿಜಕ್ಕೂ ಒಳ್ಳೆಯ ತಂಡ. ಟೂರ್ನಿ ಆರಂಭಕ್ಕೂ ಮುನ್ನ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಭಾರತ ತನ್ನ ಸಾಮರ್ಥ್ಯಕ್ಕೆ ತಕ್ಕಂತಹ ಪ್ರದರ್ಶನ ನೀಡಲಿಲ್ಲ ಎಂದು ಇಂಜಮಾಮ್ ಹೇಳಿದ್ದಾರೆ.
ಪಾಕ್ ವಿರುದ್ದ ಸೋಲಿನ ಬಳಿಕ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ ಕೂಡಾ ಮುಗ್ಗರಿಸಿತ್ತು. ಇದಾದ ಬಳಿಕ ಭಾರತ ತಂಡವು ಸ್ಕಾಟ್ಲೆಂಡ್, ನಮೀಬಿಯಾ ಹಾಗೂ ಆಫ್ಘಾನಿಸ್ತಾನ ವಿರುದ್ದ ಗೆಲುವು ಸಾಧಿಸಿತಾದರೂ, ಸೆಮೀಸ್‌ಗೇರಲು ವಿಫಲವಾಗಿತ್ತು.