Ind vs NZ Kanpur Test: ಇಲ್ಲಿದೆ ಮೊದಲ ಟೆಸ್ಟ್‌ಗೆ ಟೀಂ ಇಂಡಿಯಾ ಸಂಭಾವ್ಯ ತಂಡ..!

First Published | Nov 24, 2021, 6:58 PM IST

ಬೆಂಗಳೂರು: ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ತಂಡಗಳ ನಡುವಿನ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯವು ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ (Green Park Stadium) ನವೆಂಬರ್25ರಿಂದ ಆರಂಭವಾಗಲಿದೆ. ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ (Rohit Sharma), ಬುಮ್ರಾ ಹಾಗೂ ಶಮಿ ಅನುಪಸ್ಥಿತಿಯಲ್ಲಿ ಮೊದಲ ಟೆಸ್ಟ್‌ಗೆ ಟೀಂ ಇಂಡಿಯಾ ಸಜ್ಜಾಗಿದೆ. ಮೊದಲ ಟೆಸ್ಟ್‌ ಪಂದ್ಯಕ್ಕೂ ಮುನ್ನ ಕೆ.ಎಲ್. ರಾಹುಲ್‌ (KL Rahul) ಕೂಡಾ ಗಾಯದ ಸಮಸ್ಯೆಯಿಂದ ಹೊರಬಿದ್ದಿದ್ದಾರೆ. ಇದೆಲ್ಲದರ ನಡುವೆ ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್‌ಗೆ ಟೀಂ ಇಂಡಿಯಾ (Team India) ಸಂಭಾವ್ಯ ತಂಡ ಹೀಗಿದೆ ನೋಡಿ.

1. ಮಯಾಂಕ್ ಅಗರ್‌ವಾಲ್: ಕರ್ನಾಟಕದ ಆರಂಭಿಕ ಬ್ಯಾಟರ್‌ ಮಯಾಂಕ್‌ ಅಗರ್‌ವಾಲ್‌ಗೆ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳಲು ಮತ್ತೊಂದು ಸುವರ್ಣಾವಕಾಶ ಬಂದೊದಗಿದೆ. ಆಸ್ಟ್ರೇಲಿಯಾ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ಮಯಾಂಕ್, ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.

2. ಶುಭ್‌ಮನ್ ಗಿಲ್‌: ಯುವ ಕ್ರಿಕೆಟಿಗ ಶುಭ್‌ಮನ್‌ ಗಿಲ್ ಕೂಡಾ ಉತ್ತಮ ಆರಂಭ ಪಡೆಯುತ್ತಿದ್ದು, ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲರಾಗುತ್ತಿದ್ದಾರೆ. ರಾಹುಲ್ ಅನುಪಸ್ಥಿತಿಯಲ್ಲಿ ಗಿಲ್‌ ಫಾರ್ಮ್‌ಗೆ ಮರಳಲು ಎದುರು ನೋಡುತ್ತಿದ್ದಾರೆ.

Latest Videos


3. ಚೇತೇಶ್ವರ್ ಪೂಜಾರ: ಟೀಂ ಇಂಡಿಯಾ ಟೆಸ್ಟ್‌ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ, ಕಳೆದ ಮೂರು ವರ್ಷಗಳಿಂದ ಶತಕ ಬಾರಿಸಲು ವಿಫಲರಾಗುತ್ತಿದ್ದಾರೆ. ಇದೀಗ ದ್ರಾವಿಡ್‌ ಮಾರ್ಗದರ್ಶನದಲ್ಲಿ ಫಾರ್ಮ್‌ಗೆ ಮರಳಲು ಪೂಜಾರ ಎದುರು ನೋಡುತ್ತಿದ್ದಾರೆ. 

4. ಅಜಿಂಕ್ಯ ರಹಾನೆ: ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರಹಾನೆ ಮೊದಲ ಟೆಸ್ಟ್‌ನಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ರಹಾನೆ ಕೂಡಾ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದು, ತಮ್ಮ ಮೇಲಿರುವ ಟೀಕೆಗೆ ಅಜಿಂಕ್ಯ ರಹಾನೆ ಬ್ಯಾಟಿಂದ ಉತ್ತರಿಸಲು ಕಾಯುತ್ತಿದ್ದಾರೆ.

5. ಶ್ರೇಯಸ್ ಅಯ್ಯರ್: ಮುಂಬೈ ಮೂಲದ ಪ್ರತಿಭಾನ್ವಿತ ಬ್ಯಾಟರ್ ಶ್ರೇಯಸ್ ಅಯ್ಯರ್ ಕಾನ್ಪುರ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ರಹಾನೆ ಈಗಾಗಲೇ ಖಚಿತಪಡಿಸಿದ್ದಾರೆ. ಪಾದಾರ್ಪಣೆ ಪಂದ್ಯದಲ್ಲಿ ಮಿಂಚಲು ಅಯ್ಯರ್ ಸಿದ್ದರಾಗಿದ್ದಾರೆ.

6. ವೃದ್ದಿಮಾನ್ ಸಾಹ: ರಿಷಭ್ ಪಂತ್ ಕಿವೀಸ್‌ ಟೆಸ್ಟ್‌ನಿಂದ ವಿಶ್ರಾಂತಿ ಪಡೆದಿದ್ದು, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಅನುಭವಿ ವಿಕೆಟ್‌ ಕೀಪರ್ ವೃದ್ದಿಮಾನ್ ಸಾಹ ಎದುರು ನೋಡುತ್ತಿದ್ದಾರೆ.

7. ರವೀಂದ್ರ ಜಡೇಜಾ: ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಯಾವುದೇ ಕ್ಷಣದಲ್ಲಿ ಬೇಕಾದರೂ ಆಸರೆಯಾಗಬಲ್ಲ ಕ್ರಿಕೆಟಿಗ. ಹೀಗಾಗಿ ಜಡ್ಡು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ

8. ರವಿಚಂದ್ರನ್ ಅಶ್ವಿನ್‌: ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನ ಬಹುದೊಡ್ಡ ಮ್ಯಾಚ್ ವಿನ್ನರ್ ಎನಿಸಿಕೊಂಡಿದ್ದಾರೆ. ಈಗಾಗಲೇ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿ ಮಿಂಚಿರುವ ಅಶ್ವಿನ್, ಇದೀಗ ಮತ್ತೊಮ್ಮೆ ಕಿವೀಸ್‌ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.

9. ಅಕ್ಷರ್ ಪಟೇಲ್: ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ತವರಿನಲ್ಲಿ ಇಂಗ್ಲೆಂಡ್ ವಿರುದ್ದ ನಡೆದ ಸರಣಿಯಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಮಿಂಚಿದ್ದರು. ಇದೀಗ ನ್ಯೂಜಿಲೆಂಡ್ ಎದುರು ಅಂತಹದ್ದೇ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.

Mohammed Siraj

10. ಮೊಹಮ್ಮದ್ ಸಿರಾಜ್: ಆಸ್ಟ್ರೇಲಿಯಾ ಪ್ರವಾಸದಿಂದ ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಕರಾರುವಕ್ಕಾದ ದಾಳಿಯ ಮೂಲಕ ಆಯ್ಕೆ ಸಮಿತಿಯ ಮನ ಗೆದ್ದಿದ್ದು, ಮತ್ತೊಮ್ಮೆ ಕಿವೀಸ್ ಎದುರು ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

11. ಉಮೇಶ್ ಯಾದವ್: ಮತ್ತೋರ್ವ ತಜ್ಞ ವೇಗಿಯ ಸ್ಥಾನಕ್ಕೆ ಉಮೇಶ್ ಯಾದವ್ ಹಾಗೂ ಇಶಾಂತ್ ಶರ್ಮಾ ನಡುವೆ ಸಾಕಷ್ಟು ಪೈಪೋಟಿಯಿದ್ದು, ಉಮೇಶ್ ಯಾದವ್‌ಗೆ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ.

click me!