ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಕಾನ್ಪುರದ ಗ್ರೀನ್ ಪಾರ್ಕ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಮೂಲದ ರಚಿನ್ ರವೀಂದ್ರ ಹಾಗೂ ಅಜಾಜ್ ಪಟೇಲ್ ದಿಟ್ಟ ಹೋರಾಟ ನಡೆಸುವ ಮೂಲಕ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯವಾಗುವಂತೆ ಮಾಡಿದ್ದರು.
ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದ್ದರಿಂದ ಇದೀಗ ಎರಡನೇ ಟೆಸ್ಟ್ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಹೀಗಿರುವಾಗಲೇ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಮಳೆ ಸುರಿದಿದ್ದರಿಂದ ಮುಂಬೈನ ವಾಂಖೆಡೆ ಮೈದಾನದಲ್ಲಿ ಇನ್ನೂ ಟಾಸ್ ಕೂಡಾ ನಡೆದಿಲ್ಲ.
ಎರಡನೇ ಟೆಸ್ಟ್ ಪಂದ್ಯ ಗೆದ್ದು ತವರಿನಲ್ಲಿ ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದ್ದ ಟೀಂ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಮೂವರು ಅನುಭವಿ ಕ್ರಿಕೆಟಿಗರು ಮುಂಬೈ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.
ಹೌದು, ಟೀಂ ಇಂಡಿಯಾ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ ಹಾಗೂ ವೇಗಿ ಇಶಾಂತ್ ಶರ್ಮಾ ಮುಂಬೈ ಟೆಸ್ಟ್ ಪಂದ್ಯದಿಂದ ಹೊರಬಿದ್ದಿರುವುದಾಗಿ ಬಿಸಿಸಿಐ ಖಚಿತಪಡಿಸಿದೆ.
ಕಿವೀಸ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನದಾಟದಲ್ಲಿ ಇಶಾಂತ್ ಶರ್ಮಾ ಅವರ ಎಡ ಕಿರುಬೆರಳು ಕೀಲು ತಪ್ಪಿದ್ದು, ವೈದ್ಯಕೀಯ ಸಿಬ್ಬಂದಿಗಳು ಅವರ ಬೆರಳಿನ ಮೇಲೆ ನಿಗಾಯಿಟ್ಟಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಿಸಿಸಿಐ ತಿಳಿಸಿದೆ.
ಇನ್ನು ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ್ದಷ್ಟೇ ಅಲ್ಲದೇ ಬೌಲಿಂಗ್‌ನಲ್ಲೂ ನೆರವಾಗಿದ್ದ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಬಲ ಮುಂಗೈ ಗಾಯಗೊಂಡಿದ್ದು, ವೈದ್ಯಕೀಯ ಸಿಬ್ಬಂದಿ ವಿಶ್ರಾಂತಿ ಪಡೆಯಲು ಸೂಚಿಸಿರುವುದರಿಂದ ಜಡ್ಡು ಸಹಾ ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.
Ajinkya Rahane
ಇನ್ನು ಅಜಿಂಕ್ಯ ರಹಾನೆ ಕಾನ್ಪುರ ಟೆಸ್ಟ್ ವೇಳೆ ಫೀಲ್ಡಿಂಗ್ ಮಾಡುವಾಗ ಎಡಗಾಲು ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ. ರಹಾನೆ ಸಂಪೂರ್ಣವಾಗಿ ಸ್ನಾಯು ಸೆಳೆತದಿಂದ ಗುಣಮುಖರಾಗದ ಹಿನ್ನೆಲೆಯಲ್ಲಿ ಮುಂಬೈ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.
ಇದೀಗ ರಹಾನೆ ಬದಲಿಗೆ ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾ ಬದಲಿಗೆ ಮೊಹಮ್ಮದ್ ಸಿರಾಜ್ ತಂಡ ಕೂಡಿಕೊಳ್ಳುವುದು ಖಚಿತ ಎನಿಸಿದ್ದು, ಜಡೇಜಾ ಬದಲಿಗೆ ಯಾರು ತಂಡ ಕೂಡಿಕೊಳ್ಳಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.