ಭಾರತ ಕ್ರಿಕೆಟ್ ತಂಡವು ಕಂಡಂತಹ ಅದ್ಭುತ ಬ್ಯಾಟರ್‌ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಪ್ರಮುಖ ಆಟಗಾರರೆನಿಸಿದ್ದಾರೆ. ಈ ಇಬ್ಬರು ಆಟಗಾರರು ಏಕಾಂಗಿಯಾಗಿ ಭಾರತಕ್ಕೆ ಹಲವು ಬಾರಿ ಗೆಲುವು ತಂದುಕೊಟ್ಟಿದ್ದಾರೆ.
ಇನ್ನು ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಜೋಡಿ ಹಲವಾರು ಬಾರಿ ಅತ್ಯುತ್ತಮ ಜತೆಯಾಟವಾಡುವ ಮೂಲಕ ಹಲವು ಅವಿಸ್ಮರಣೀಯ ಇನಿಂಗ್ಸ್ ಕಟ್ಟಿದ್ದಾರೆ.
ಇನ್ನು ಆಸ್ಟ್ರೇಲಿಯಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯ ಪೈಕಿ ಮೊದಲೆರಡು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿಲ್ಲ.
ಇದೀಗ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜೋಡಿ ಏಕದಿನ ಕ್ರಿಕೆಟ್‌ನಲ್ಲಿ ಇನ್ನು ಕೇವಲ ಎರಡು ರನ್ ಜತೆಯಾಟವಾಡಿದರೆ, ಈ ಜೋಡಿ 5,000 ರನ್‌ಗಳ ಜತೆಯಾಟವಾಡಿದ ಸಾಧನೆ ಮಾಡಲಿದ್ದಾರೆ.
ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 5 ಸಾವಿರ ರನ್‌ಗಳ ಜತೆಯಾಟವಾಡಿದ ಜೋಡಿ ಎನ್ನುವ ವಿಶ್ವದಾಖಲೆಗೆ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಪಾತ್ರರಾಗಲಿದ್ದಾರೆ.
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜೋಡಿ ಒಟ್ಟಾರೆ 85 ಇನಿಂಗ್ಸ್‌ಗಳನ್ನಾಡಿ 62.47ರ ಬ್ಯಾಟಿಂಗ್ ಸರಾಸರಿಯಲ್ಲಿ 4998 ರನ್ ಬಾರಿಸಿದ್ದಾರೆ. ಇದರಲ್ಲಿ 18 ಶತಕ ಹಾಗೂ 15 ಅರ್ಧಶತಕಗಳ ಜತೆಯಾಟವು ಮೂಡಿ ಬಂದಿದೆ.
ಇನ್ನು ಇಲ್ಲಿಯವರೆಗೆ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 5000 ರನ್‌ಗಳ ಜತೆಯಾಟವಾಡಿದ ವಿಶ್ವದಾಖಲೆ ವೆಸ್ಟ್ ಇಂಡೀಸ್‌ನ ಗಾರ್ಡನ್ ಗ್ರೀನಿಜ್ ಹಾಗೂ ಡೆಸ್ಮಂಡ್ ಹೇಯ್ನ್ಸ್ ಹೆಸರಿನಲ್ಲಿತ್ತು. ಈ ಜೋಡಿ 97 ಇನಿಂಗ್ಸ್‌ಗಳನ್ನಾಡಿ ಈ ಸಾಧನೆ ಮಾಡಿದ್ದರು.
ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ಗಳ ಜತೆಯಾಟವಾಡಿದ ವಿಶ್ವದಾಖಲೆ ಕ್ರಿಕೆಟ್ ದಂತಕಥೆಗಳಾದ ಸಚಿನ್ ತೆಂಡುಲ್ಕರ್ ಹಾಗೂ ಸೌರವ್ ಗಂಗೂಲಿ ಹೆಸರಿನಲ್ಲಿದೆ. ಈ ಜೋಡಿ ಏಕದಿನ ಕ್ರಿಕೆಟ್‌ನಲ್ಲಿ 8,227 ರನ್‌ಗಳ ಜತೆಯಾಟವಾಡಿದೆ