2017ರಿಂದ ಮೂರು ಮಾದರಿಯಲ್ಲೂ ವಿರಾಟ್ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಸಾಗರದಾಚೆ ಹಾಗೂ ತವರಿನಲ್ಲಿ ಟೀಂ ಇಂಡಿಯಾ ಸಾಕಷ್ಟು ದಾಖಲೆಗಳನ್ನು ನಿರ್ಮಿಸಿದೆ. ಆದರೆ, ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಒಂದೇ ಒಂದು ಐಸಿಸಿ ಟ್ರೋಫಿ ಗೆದ್ದಿಲ್ಲ.
ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಸಾಕಷ್ಟು ದಾಖಲೆಗಳನ್ನು ಬರೆದಿದ್ದರು ಮಹತ್ವದ ಟ್ರೋಫಿ ಗೆಲ್ಲುವ ವಿಚಾರದಲ್ಲಿ ಹಿಂದೆ ಬಿದ್ದಿದ್ದಾರೆ. ಐಪಿಎಲ್‌ನಲ್ಲಿ ಕೂಡಾ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡವು ಕಪ್ ಗೆಲ್ಲಲು ವಿಫಲವಾಗಿತ್ತು.
ಇತ್ತೀಚೆಗಷ್ಟೇ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲೂ ಟೀಂ ಇಂಡಿಯಾ ಸೋಲುಂಡಿತ್ತು. ಈ ವೇಳೆ ಕೊಹ್ಲಿ ನಾಯಕತ್ವದ ಕುರಿತು ಟೀಕೆಗಳು ವ್ಯಕ್ತವಾಗಿದ್ದವು. ಹೀಗೆ ಸಾಕಷ್ಟು ಒತ್ತಡಗಳ ಕಾರಣ ಕೊಹ್ಲಿ, ಟಿ20 ನಾಯಕತ್ವದಿಂದ ನಿರ್ಗಮಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ವಿರಾಟ್ ಕೊಹ್ಲಿ ಟಿ20 ನಾಯಕತ್ವದಲ್ಲಿ ಟೀಂ ಇಂಡಿಯಾ ಅಸಾಧಾರಣ ದಾಖಲೆಗಳನ್ನು ನಿರ್ಮಿಸಿದೆ. SENA(ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ) ರಾಷ್ಟ್ರಗಳ ಎದುರು ಟಿ20 ಸರಣಿ ಗೆದ್ದ ನಾಯಕ ಎನ್ನುವ ಕೀರ್ತಿ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ
ಅತೀ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದ ಭಾರತದ ನಾಯಕರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಭಾರತ ಒಟ್ಟು 45 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 27ರಲ್ಲಿ ಜಯ ಸಾಧಿಸಿದೆ.
ಕೊಹ್ಲಿ ನಾಯಕತ್ವದಲ್ಲಿ ಭಾರತದ ಆಡಿದ ಕೊನೆಯ 10 ಟಿ20 ಸರಣಿಯಲ್ಲಿ 7 ಸರಣಿ ಗೆಲುವು ಸಾಧಿಸಿದೆ. ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ, ಇಂಗ್ಲೆಂಡ್‌ನಂತಹ ಬಲಿಷ್ಠ ತಂಡಗಳೆದುರು ವಿರಾಟ್ ಕೊಹ್ಲಿ ಟಿ20 ಸರಣಿ ಗೆದ್ದು ಬೀಗಿತ್ತು.
ನಾಯಕರಾಗಿ ಟಿ20ಯಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ(12) ಮೊದಲ ಸ್ಥಾನದಲ್ಲಿದ್ದಾರೆ. ಟಿ20 ನಾಯಕರಾಗಿ ವೇಗವಾಗಿ 1,000 ರನ್ ಬಾರಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಲ್ಲಿದೆ. ಟಿ20 ನಾಯಕರಾಗಿ 1,500ಕ್ಕೂ ಹೆಚ್ಚು ರನ್ ಬಾರಿಸಿದ ಇಬ್ಬರು ಆಟಗಾರರಲ್ಲಿ ಕೊಹ್ಲಿ(1502) ಕೂಡಾ ಒಬ್ಬರು.