T20 World Cup: Ind vs Pak ಪಾಕ್‌ ವಿರುದ್ದದ ಪಂದ್ಯಕ್ಕೆ ಟೀಂ ಇಂಡಿಯಾ ಸಂಭಾವ್ಯ ತಂಡ ಪ್ರಕಟ

ಬೆಂಗಳೂರು: ಕ್ರಿಕೆಟ್‌ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ದಿನ ಕೊನೆಗೂ ಬಂದೇ ಬಿಟ್ಟಿದೆ. ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯ ಸೂಪರ್‌ ಸಂಡೇಯ ಎರಡನೇ ಪಂದ್ಯದಲ್ಲಿಂದು ಭಾರತ ಹಾಗೂ ಪಾಕಿಸ್ತಾನ (Ind vs Pak) ಕ್ರಿಕೆಟ್ ತಂಡಗಳು ಸೆಣಸಾಟ ನಡೆಸಲಿವೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿತಾ (Team India) ಮೊದಲ ಪಂದ್ಯದಲ್ಲಿ ಪಾಕ್‌ ಮಣಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡುವ ಲೆಕ್ಕಾಚಾರದಲ್ಲಿದೆ. ದುಬೈ(Dubai) ನಲ್ಲಿ ಇಂದು ಸಂಜೆ 7.30ಕ್ಕೆ ಆರಂಭವಾಗಲಿರುವ ಪಂದ್ಯದಲ್ಲಿ ಟೀಂ ಇಂಡಿಯಾ ಸಂಭಾವ್ಯ ತಂಡ ಹೀಗಿದೆ ನೋಡಿ
 

1. ಕೆ.ಎಲ್‌.ರಾಹುಲ್‌:

ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್‌. ಐಪಿಎಲ್ ಹಾಗೂ ಅಭ್ಯಾಸ ಪಂದ್ಯಗಳಲ್ಲಿ ಮಿಂಚಿರುವ ಕನ್ನಡಿಗ ಕೆ.ಎಲ್‌ ರಾಹುಲ್‌ ಆರಂಭಿಕನಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತ  

2.ರೋಹಿತ್‌ ಶರ್ಮಾ:

ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಕೂಡಾ ಪಾಕ್ ವಿರುದ್ದ ಅಬ್ಬರಿಸಲು ಎದುರು ನೋಡುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ದದ ಅಭ್ಯಾಸ ಪಂದ್ಯದಲ್ಲಿ ಹಿಟ್‌ಮ್ಯಾನ್ ಆಕರ್ಷಕ ಅರ್ಧಶತಕ ಚಚ್ಚಿದ್ದರು


3. ವಿರಾಟ್‌ ಕೊಹ್ಲಿ: 
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಸಾಧಾರಣ ಪ್ರದರ್ಶನ ತೋರಿದ್ದಾರೆ. ಹೀಗಾಗಿ ವಿರಾಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ 

4.ಸೂರ್ಯಕುಮಾರ್‌ ಯಾದವ್: 
ಭಾರತದ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ. ಇಶಾನ್‌ ಕಿಶನ್ ಹಾಗೂ ಸೂರ್ಯ ನಡುವೆ ಪೈಪೋಟಿಯಿದೆಯಾದರೂ, ಮಧ್ಯಮ ಕ್ರಮಾಂಕದಲ್ಲಿ ಸೂರ್ಯನಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು.

5.ರಿಷಭ್‌ ಪಂತ್‌:

ಟೀಂ ಇಂಡಿಯಾ ವಿಕೆಟ್ ಕೀಪರ್‌ ಬ್ಯಾಟರ್‌. ಮಧ್ಯಮ ಕ್ರಮಾಂಕದಲ್ಲಿ ನಿರ್ಭಯವಾಗಿ ಬ್ಯಾಟ್‌ ಬೀಸುವ ಕ್ಷಮತೆ ಪಂತ್‌ಗಿದೆ. ಐಪಿಎಲ್‌ನಲ್ಲಿ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್‌ ಬೀಸಿರುವ ಪಂತ್ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬೆನ್ನೆಲುಬು. 

6. ಹಾರ್ದಿಕ್‌ ಪಾಂಡ್ಯ: 
ಹಾರ್ಡ್‌ ಹಿಟ್ಟರ್ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ಫಿನಿಶರ್ ಪಾತ್ರ ನಿಭಾಯಿಸಲಿದ್ದಾರೆ. ಪಾಂಡ್ಯ ಇನ್ನೂ ಬೌಲಿಂಗ್ ಆರಂಭಿಸಿಲ್ಲವಾದರೂ, ತಜ್ಞ ಬ್ಯಾಟ್ಸ್‌ಮನ್‌ ರೂಪದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ 

7. ರವೀಂದ್ರ ಜಡೇಜಾ:
ಟೀಂ ಇಂಡಿಯಾ ತಾರಾ ಆಲ್ರೌಂಡರ್. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಉಪಯುಕ್ತ ಕಾಣಿಕೆ ನೀಡಬಲ್ಲ ಜಡೇಜಾ, ನೆರೆಯ ಪಾಕ್ ವಿರುದ್ದ ಮಿಂಚಲು ತುದಿಗಾಲಿನಲ್ಲಿ ನಿಂತಿದ್ದಾರೆ.

8. ಭುವನೇಶ್ವರ್‌ ಕುಮಾರ್:

ಟೀಂ ಇಂಡಿಯಾ ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್, ಆಸ್ಟ್ರೇಲಿಯಾ ವಿರುದ್ದ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದರು. 8ನೇ ಸ್ಥಾನಕ್ಕೆ ಭುವಿ ಹಾಗೂ ಶಾರ್ದೂಲ್ ಠಾಕೂರ್ ನಡುವೆ ಪೈಪೋಟಿಯಿದೆಯಾದರೂ, ಹೈವೋಲ್ಟೇಜ್‌ ಪಂದ್ಯವಾಗಿರುವುದರಿಂದ ಭುವಿಗೆ ಸ್ಥಾನ ಸಿಗುವ ಸಾಧ್ಯತೆ ಹೆಚ್ಚು.

9. ಮೊಹಮದ್‌ ಶಮಿ:

ವೇಗಿ ಮೊಹಮ್ಮದ್ ಶಮಿ ಐಪಿಎಲ್ ಹಾಗೂ ಮೊದಲ ಅಭ್ಯಾಸ ಪಂದ್ಯದಲ್ಲಿ ಮೊನಚಾದ ದಾಳಿ ನಡೆಸುವ ಮೂಲಕ ತಾನೆಷ್ಟು ಅಪಾಯಕಾರಿ ಬೌಲರ್ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. 

10. ಜಸ್‌ಪ್ರೀತ್‌ ಬುಮ್ರಾ:

ಟೀಂ ಇಂಡಿಯಾ ಯಾರ್ಕರ್‌ ಹಾಗೂ ಡೆತ್ ಓವರ್ ಸ್ಪೆಷಲಿಸ್ಟ್ ಆಗಿರುವ ಬುಮ್ರಾ ವಿಶ್ವದ ಯಾವುದೇ ಪಿಚ್‌ನಲ್ಲಿ ಬೇಕಿದ್ದರೂ ಅಪಾಯಕಾರಿಯಾಗಬಲ್ಲ ಬೌಲರ್. ಪಾಕ್‌ ವಿರುದ್ದ ಮಾರಕ ದಾಳಿ ನಡೆಸಲು ಬುಮ್ರಾ ರೆಡಿಯಾಗಿದ್ದಾರೆ. 

11. ವರುಣ್‌ ಚಕ್ರವರ್ತಿ: 
ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಇತ್ತೀಚೆಗಷ್ಟೇ ಮುಕ್ತಾಯವಾದ ಯುಎಇ ಪಿಚ್‌ನಲ್ಲಿ ಮಾರಕ ದಾಳಿ ನಡೆಸುವ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ತಬ್ಬಿಬ್ಬುಗೊಳಿಸಿದ್ದು, ಅಂತಹದ್ದೇ ಪ್ರದರ್ಶನ ತೋರುವ ಉತ್ಸಾಹದಲ್ಲಿದ್ದಾರೆ. ಸ್ಪಿನ್ನರ್ ಸ್ಥಾನಕ್ಕೆ ವರುಣ್ ಚಕ್ರವರ್ತಿ ಹಾಗೂ ರಾಹುಲ್ ಚಹಾರ್ ನಡುವೆ ಪೈಪೋಟಿಯಿದೆ

Latest Videos

click me!