ಮೊಹಮ್ಮದ್ ಶಮಿ ನಿಂದಕರ ಬಾಯಿ ಮುಚ್ಚಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಿಟ್ಟ ನುಡಿ...!

First Published Oct 31, 2021, 1:07 PM IST

ದುಬೈ: ಯುಎಇನಲ್ಲಿ ನಡೆಯತ್ತಿರುವ ಟಿ20 ವಿಶ್ವಕಪ್ (T20 World Cup) ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ ಟೀಂ ಇಂಡಿಯಾ (Team India) ಆಘಾತಕಾರಿ ಸೋಲು ಕಂಡ ಬಳಿಕ, ಭಾರತ ತಂಡದ ವೇಗದ ಬೌಲರ್‌ ಮೊಹಮ್ಮದ್ ಶಮಿ (Mohammed Shami) ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಇದೀಗ ನಾಯಕ ವಿರಾಟ್ ಕೊಹ್ಲಿ , ಶಮಿ ಬೆಂಬಲಕ್ಕೆ ನಿಂತಿದ್ದು ಟೀಕಾಕಾರರನ್ನು ಬೆನ್ನು ಮೂಳೆಯಿಲ್ಲದ ಜನ ಎಂದು ಕಟುಶಬ್ಧಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

IND vs PAK

ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಪಾಕಿಸ್ತಾನ ವಿರುದ್ದ 10 ವಿಕೆಟ್‌ಗಳ ಅಂತರದ ಆಘಾತಕಾರಿ ಸೋಲು ಕಂಡಿತ್ತು. ಈ ಸೋಲಿನ ಬೆನ್ನಲ್ಲೇ ಭಾರತ ಕ್ರಿಕೆಟ್ ತಂಡದ ಮೇಲೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ವಿಶ್ವಕಪ್‌ ಇತಿಹಾಸದಲ್ಲಿ ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನ ವಿರುದ್ದ ಮೊದಲ ಬಾರಿಗೆ ಸೋಲು ಕಂಡಿತ್ತು. ಹೀಗಾಗಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬೇಸರವನ್ನು ಹೊರಹಾಕಿದ್ದರು. ಮತ್ತೆ ಕೆಲವರು ಸೋಲು-ಗೆಲುವನ್ನು ಸಹಜವಾಗಿ ಸ್ವೀಕರಿಸಿದ್ದರು.

ಆದರೆ ಮತ್ತೆ ಕೆಲವು ಕ್ರಿಕೆಟ್ ದುರಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ, ಮೊಹಮ್ಮದ್ ಶಮಿ ಅವರನ್ನು ಧರ್ಮದ ಆಧಾರದಲ್ಲಿ ನೀಚ ಪದಗಳನ್ನು ಬಳಸಿ ನಿಂದಿಸಿದ್ದರು. ಶಮಿ ಪಾಕ್ ಏಜೆಂಟ್, ಆತ ಪಾಕಿಸ್ತಾನಕ್ಕೆ ಹೋಗಲಿ ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿದ್ದರು.

ಇದೀಗ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೋತ ನಂತರ ಟೀಕೆ, ನಿಂದನೆಗೆ ಗುರಿಯಾಗಿದ್ದ ವೇಗದ ಬೌಲರ್‌ ಮೊಹಮದ್‌ ಶಮಿಯನ್ನು ತಂಡದ ನಾಯಕ ವಿರಾಟ್‌ ಕೊಹ್ಲಿ ಬೆಂಬಲಿಸಿದ್ದಾರೆ. 

‘ಬೆನ್ನು ಮೂಳೆ ಹೊಂದಿಲ್ಲದ ಕೆಲವು ಜನರು ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬ ವ್ಯಕ್ತಿಯ ಕುರಿತು ಅವಹೇಳನ ಮಾಡುತ್ತಿದ್ದಾರೆ. ಧರ್ಮವನ್ನು ಮುಂದಿಟ್ಟು ಟೀಕಿಸುವುದು ಮನುಷ್ಯತ್ವದ ಅತ್ಯಂತ ಕೀಳು ಮನೋಭಾವ’ ಎಂದು ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲರಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕಿದೆ. ಟೀಂ ಇಂಡಿಯಾ ನಾಯಕನಾಗಿ ನಾನಂತೂ ಧರ್ಮದ ಅಧಾರದಲ್ಲಿ ಯಾರೊಂದಿಗೂ ಬೇಧಬಾವ ಮಾಡಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

ಧರ್ಮ ಅತ್ಯಂತ ಪವಿತ್ರ ಹಾಗೂ ವೈಯುಕ್ತಿಕ ವಿಷಯ. ನಾವಿಲ್ಲಿ ಮೈದಾನದಲ್ಲಿ ಏನು ಮಾಡುತ್ತಿದ್ದೇವೆ ಎನ್ನುವುದನ್ನು ಅರಿವಿಲ್ಲದೇ ಕೆಲವು ಜನರು ಹೀಗೆ ತಮ್ಮ ಹತಾಶೆಯನ್ನು ಹೊರಹಾಕುತ್ತಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ.

ಕೆಲವು ವರ್ಷಗಳಿಂದ ಜಸ್ಪ್ರೀತ್ ಬುಮ್ರಾ ಜತೆಗೂಡಿ ಮೊಹಮ್ಮದ್ ಶಮಿ ಭಾರತಕ್ಕೆ ಎಷ್ಟೆಲ್ಲಾ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ ಎನ್ನುವ ಸತ್ಯ ಟೀಕಿಸುವ ಇಂತವರಿಗೆ ಗೊತ್ತಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.  

Virat Kohli

ನಾಯಕನಾಗಿ ನಿಮ್ಮಲ್ಲಿ ಒಂದಂತೂ ಗ್ಯಾರಂಟಿ ನೀಡುತ್ತೇನೆ. ಇಂತಹ ಟೀಕೆಗಳು ತಂಡಗೊಳಗೆ ನಾವು ಕಟ್ಟಿಕೊಂಡಿರುವ ಪರಿಸರವನ್ನು ಎಳ್ಳಷ್ಟು ಹಾಳು ಮಾಡುವುದಿಲ್ಲ. ನಾವು ಎಂದೆಂದಿಗೂ ಶಮಿ ಜತೆಗಿದ್ದೇವೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. 

click me!