Ind vs SA: ದಾದಾ, ದ್ರಾವಿಡ್‌, ಸಚಿನ್‌ ದಾಖಲೆ ಮುರಿಯಲು ಸಜ್ಜಾದ ವಿರಾಟ್ ಕೊಹ್ಲಿ..!

First Published Jan 19, 2022, 1:18 PM IST

ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಯಕತ್ವದಿಂದ ಕೆಳಗಿಳಿದ ಬಳಿಕ ವಿರಾಟ್ ಕೊಹ್ಲಿ (Virat Kohli) ಮೊದಲ ಬಾರಿಗೆ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಈ  ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೆಲವು ಅಪರೂಪದ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ವಿರಾಟ್ ಕೊಹ್ಲಿ 2019ರಲ್ಲಿ ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ್ದರು. ಇದಾದ ಬಳಿಕ ಕೊಹ್ಲಿ ಬ್ಯಾಟಿಂದ ಮೂರಂಕಿ ಮೊತ್ತ ದಾಖಲಾಗಿಲ್ಲ. ಇದೀಗ ನಾಯಕತ್ವ ಜವಾಬ್ದಾರಿಯಿಂದ ಬಿಡುವು ಪಡೆದುಕೊಂಡಿರುವ ಕೊಹ್ಲಿ, ದಾಖಲೆಗಳನ್ನು ಬರೆಯಲು ಸಜ್ಜಾಗಿದ್ದಾರೆ.
 

ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಅತೀ ಹೆಚ್ಚು ರನ್‌ ಗಳಿಸಿದ ಭಾರತದ ಬ್ಯಾಟರ್‌ ಎನಿಸಿಕೊಳ್ಳಲು ಕೊಹ್ಲಿ(1278)ಗೆ 27 ರನ್‌ ಅಗತ್ಯವಿದೆ. 27 ರನ್‌ ಗಳಿಸಿದರೆ ಸೌರವ್‌ ಗಂಗೂಲಿ(1313) ಹಾಗೂ ರಾಹುಲ್‌ ದ್ರಾವಿಡ್‌(1309)ರನ್ನು ಕೊಹ್ಲಿ ಹಿಂದಿಕ್ಕಲಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್‌ ತೆಂಡುಲ್ಕರ್‌(2001) ಅಗ್ರ ಸ್ಥಾನದಲ್ಲಿದ್ದಾರೆ.

ವಿದೇಶಿ ನೆಲದಲ್ಲಿ ಏಕದಿನ ಮಾದರಿಯಲ್ಲಿ ಗರಿಷ್ಠ ರನ್‌ ಸಾಧನೆ ಮಾಡಿರುವ ಸಚಿನ್‌(5,065) ದಾಖಲೆ ಮುರಿಯಲು ಕೊಹ್ಲಿ(5057)ಗೆ ಇನ್ನು ಕೇವಲ 9 ರನ್‌ಗಳ ಅಗತ್ಯವಿದೆ. ಮೊದಲ ಏಕದಿನ ಪಂದ್ಯದಲ್ಲೇ ಈ ದಾಖಲೆ ನಿರ್ಮಾಣವಾಗುವ ಸಾಧ್ಯತೆಯಿದೆ.

ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್‌ ವಿದೇಶಿ ನೆಲದಲ್ಲಿ ಉತ್ತಮ ಬ್ಯಾಟಿಂಗ್ ದಾಖಲೆ ಹೊಂದಿದ್ದಾರೆ. ವಿದೇಶಿ ನೆಲದಲ್ಲಿ ಏಕದಿನದಲ್ಲಿ 2,500 ರನ್‌ ಪೂರೈಸಲು ಶಿಖರ್‌ ಧವನ್‌ಗೆ ಇನ್ನು ಕೇವಲ 12 ರನ್‌ಗಳ ಅಗತ್ಯವಿದೆ. ಸದ್ಯ ಧವನ್ 2488 ರನ್ ಬಾರಿಸಿದ್ದಾರೆ.

1992ರಿಂದ ಟೀಂ ಇಂಡಿಯಾ ಹರಿಣಗಳ ನಾಡಲ್ಲಿ 5 ಏಕದಿನ ಸರಣಿಯನ್ನಾಡಿದ್ದು, ನಾಲ್ಕರಲ್ಲಿ ಸೋಲುಂಡಿದೆ. 2018ರಲ್ಲಿ ನಡೆದ 6 ಪಂದ್ಯಗಳ ಸರಣಿಯಲ್ಲಿ 5-1 ಅಂತರದಿಂದ ಸರಣಿಯನ್ನು ತನ್ನದಾಗಿಸಿಕೊಂಡಿದ್ದು, 4 ವರ್ಷದ ಬಳಿಕ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಹರಿಣಗಳ ವಿರುದ್ಧ ಏಕದಿನ ಸರಣಿಯನ್ನಾಡಲು ಸಜ್ಜಾಗಿದೆ.

click me!