ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ಯುಎಇ ಹಾಗೂ ಓಮನ್‌ನಲ್ಲಿ ನಡೆಯಲಿದೆ.
ಭಾರತದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿಯು ಯುಎಇನ ಮೂರು ಸ್ಟೇಡಿಯಂ ಹಾಗೂ ಓಮನ್‌ನ ಒಂದು ಮೈದಾನದಲ್ಲಿ ನಡೆಯಲಿದ್ದು, ಬಿಸಿಸಿಐ ಆತಿಥ್ಯದಲ್ಲೇ ಕ್ರೀಡಾಕೂಟ ನಡೆಯಲಿದೆ.
ಇದೀಗ ಐಸಿಸಿ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿದ್ದು, ಚುಟುಕು ಕ್ರಿಕೆಟ್ ಮಹಾಸಂಗ್ರಾಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದಂತಾಗಿದೆ.
ಅರ್ಹತಾ ಸುತ್ತಿನ ಪಂದ್ಯಗಳಿಗಾಗಿ 8 ತಂಡಗಳು 4 ಸ್ಥಾನಗಳಿಗಾಗಿ ಪೈಪೋಟಿ ನಡೆಸಲಿವೆ. ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡಗಳು ಕೂಡಾ ಅರ್ಹತಾ ಸುತ್ತಿನ ಪಂದ್ಯವನ್ನಾಡಬೇಕಿದೆ.
ಅರ್ಹತಾ ಸುತ್ತಿನ ಪಂದ್ಯಗಳಿಗೆ 'ಎ' ಗುಂಪಿನಲ್ಲಿ 4 ಹಾಗೂ 'ಬಿ' ಗುಂಪಿನಲ್ಲಿ ತಲಾ 4 ತಂಡಗಳು ಸ್ಥಾನ ಪಡೆದಿವೆ. 'ಎ' ಗುಂಪಿನಲ್ಲಿ ಶ್ರೀಲಂಕಾ, ಐರ್ಲೆಂಡ್, ನೆದರ್ಲೆಂಡ್ ಹಾಗೂ ನಮೀಬಿಯಾ ತಂಡಗಳು ಸ್ಥಾನ ಪಡೆದಿವೆ.
ಇನ್ನು 'ಬಿ' ಗುಂಪಿನಲ್ಲಿ ನೆರೆಯ ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯುಗಿನಿ ಹಾಗೂ ಓಮನ್ ಕ್ರಿಕೆಟ್ ತಂಡಗಳು ಸ್ಥಾನ ಪಡೆದಿವೆ. ಒಟ್ಟು ಈ 8 ತಂಡಗಳ ಪೈಕಿ ಪ್ರತಿ ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ನೇರವಾಗಿ ಸೂಪರ್ 12 ಅಂತರವನ್ನು ಪ್ರವೇಶಿಸಲಿವೆ.
ಇನ್ನು ಸೂಪರ್ 12 ಹಂತದಲ್ಲಿ ಗೂಪ್ 1 ಮತ್ತು ಗ್ರೂಪ್ 2 ಎಂದು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಗ್ರೂಪ್ 1ರಲ್ಲಿ ಬಲಿಷ್ಠ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಅರ್ಹತಾ ಸುತ್ತಿನ ಗ್ರೂಪ್ 'ಎ' ವಿಜೇತ ತಂಡ ಹಾಗೂ ಗ್ರೂಪ್ 'ಬಿ' ನ ರನ್ನರ್ ಅಪ್ ತಂಡಗಳು ಸ್ಥಾನ ಪಡೆದಿವೆ
ಇನ್ನು ಗ್ರೂಪ್ 2ನಲ್ಲಿ ಟೂರ್ನಿಗೆ ಆತಿಥ್ಯದ ಹಕ್ಕು ಪಡೆದಿರುವ ಟೀಂ ಇಂಡಿಯಾ, ಪಾಕಿಸ್ತಾನ, ನ್ಯೂಜಿಲೆಂಡ್, ಆಫ್ಘಾನಿಸ್ತಾನ, ಅರ್ಹತಾ ಸುತ್ತಿನ ಗ್ರೂಪ್ 'ಎ' ರನ್ನರ್ ಅಪ್ ತಂಡ ಹಾಗೂ ಗ್ರೂಪ್ 'ಬಿ' ನ ವಿಜೇತ ತಂಡಗಳು ಸ್ಥಾನ ಪಡೆದಿವೆ.
ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯ ಹಾಗೂ ಫೈನಲ್ ಪಂದ್ಯದ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ, ಆದರೆ ಇದುವರೆಗೂ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ.
ಚೊಚ್ಚಲ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದವು, 2008ರಲ್ಲಿ ನಡೆದ ಆ ಟೂರ್ನಿಯ ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ರೋಚಕವಾಗಿ ಮಣಿಸಿದ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.