17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನೀರಸ ಆರಂಭ ಪಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ದ್ವಿತಿಯಾರ್ಧದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ನಾಕೌಟ್ ಹಂತ ಪ್ರವೇಶಿಸಿತ್ತು.
ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು 4 ವಿಕೆಟ್ ಅಂತರದಲ್ಲಿ ಸೋಲು ಕಾಣುವ ಮೂಲಕ ಮತ್ತೊಮ್ಮೆ ಕಪ್ ಗೆಲ್ಲುವ ಕನಸನ್ನು ಆರ್‌ಸಿಬಿ ನುಚ್ಚುನೂರು ಮಾಡಿಕೊಂಡಿದೆ.
2024ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಗೆಲುವು ಅದ್ಭುತ ಪ್ರತಿಭೆಗಳು ತಂಡಕ್ಕೆ ಸಿಕ್ಕಿವೆ. ಅದೇ ರೀತಿ ಕೆಲವು ಆಟಗಾರರು ಆರ್‌ಸಿಬಿಗೆ ಹೊರೆ ಎನಿಸಿದ್ದಾರೆ. ನಾವಿಂದು ಮುಂಬರುವ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿಯು ಕೈಬಿಡಲಿರುವ ಐದು ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.
5. ಅನೂಜ್ ರಾವತ್:
ಆರ್‌ಸಿಬಿ ತಂಡದ ವಿಕೆಟ್ ಕೀಪರ್ ಬ್ಯಾಟರ್ ಅನೂಜ್ ರಾವತ್ ಈ ಬಾರಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಮತ್ತೊಮ್ಮೆ ವಿಫಲವಾದರು.
ಆರ್‌ಸಿಬಿ ಫ್ರಾಂಚೈಸಿಯು ಕಳೆದ ಐಪಿಎಲ್ ಹರಾಜಿನಲ್ಲಿ ಅನೂಜ್ ರಾವತ್‌ಗೆ ಬರೋಬ್ಬರಿ 3.4 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಆದರೆ ಅನೂಜ್ ರಾವತ್, ಆರ್‌ಸಿಬಿ ಪರ 5 ಪಂದ್ಯಗಳನ್ನಾಡಿ ಕೇವಲ 24.50 ಸರಾಸರಿಯಲ್ಲಿ 98 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಹೀಗಾಗಿ ಆರ್‌ಸಿಬಿ ರಾವತ್ ಅವರನ್ನು ರಿಲೀಸ್ ಮಾಡೋದು ಗ್ಯಾರಂಟಿ.
4.ಅಲ್ಜಾರಿ ಜೋಸೆಫ್;
ಆರ್‌ಸಿಬಿ ತಂಡವು ಕಳೆದ ಬಾರಿಯ ಐಪಿಎಲ್ ಹರಾಜಿನಲ್ಲಿ ಖರೀದಿಸಿದ ದುಬಾರಿ ವೇಗಿ ಅಲ್ಜಾರಿ ಜೋಸೆಫ್, ಫ್ರಾಂಚೈಸಿ ಇಟ್ಟ ನಿರೀಕ್ಷೆಯನ್ನು ಮಣ್ಣು ಪಾಲು ಮಾಡಿದರು.
ಅಲ್ಜಾರಿ ಜೋಸೆಫ್ ಅವರನ್ನು ಆರ್‌ಸಿಬಿ ಫ್ರಾಂಚೈಸಿ 11.50 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಆದರೆ ವಿಂಡೀಸ್ ವೇಗಿ ಆರ್‌ಸಿಬಿ ಪರ 3 ಪಂದ್ಯಗಳನ್ನಾಡಿ 11.89ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು ಕೇವಲ ಒಂದು ವಿಕೆಟ್ ಪಡೆದು ದುಬಾರಿ ಎನಿಸಿಕೊಂಡಿದ್ದರು. ಜೋಸೆಫ್‌ಗೆ ಗೇಟ್‌ಪಾಸ್ ಫಿಕ್ಸ್.
3. ಟಾಮ್ ಕರ್ರನ್:
ಇಂಗ್ಲೆಂಡ್ ಮೂಲದ ಬೌಲಿಂಗ್ ಆಲ್ರೌಂಡರ್ ಟಾಮ್ ಕರ್ರನ್ ಅವರನ್ನು 2024ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿ 1.50 ಕೋಟಿ ರುಪಾಯಿ ನೀಡಿ ಖರೀದಿಸಿತ್ತು.
ಆದರೆ ಈ ಆವೃತ್ತಿಯಲ್ಲಿ ಟಾಮ್ ಕರ್ರನ್‌ಗೆ ಆರ್‌ಸಿಬಿ ಪರ ಒಂದೇ ಒಂದು ಪಂದ್ಯ ಆಡಲು ಅವಕಾಶ ಸಿಕ್ಕಿರಲಿಲ್ಲ. ಹೊಸ ತಂಡ ಕಟ್ಟುವ ಆಲೋಚನೆಯಲ್ಲಿರುವ ಆರ್‌ಸಿಬಿ ಟಾಮ್ ಕರ್ರನ್ ಅವರನ್ನು ತಂಡದಿಂದ ರಿಲೀಸ್ ಮಾಡಿದರೂ ಅಚ್ಚರಿಯಿಲ್ಲ.
2. ಗ್ಲೆನ್ ಮ್ಯಾಕ್ಸ್‌ವೆಲ್:
ಹಲವು ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದಲ್ಲಿರುವುದು ಡೌಟ್. 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಮ್ಯಾಕ್ಸ್‌ವೆಲ್ 10 ಪಂದ್ಯಗಳನ್ನಾಡಿ 5.78ರ ಸರಾಸರಿಯಲ್ಲಿ ಗಳಿಸಿದ್ದು ಕೇವಲ 52 ರನ್ ಮಾತ್ರ.
ಇನ್ನು ಬೌಲಿಂಗ್‌ನಲ್ಲಿ ಮ್ಯಾಕ್ಸ್‌ವೆಲ್ ಕಬಳಿಸಿದ್ದು ಕೇವಲ 6 ವಿಕೆಟ್ ಮಾತ್ರ. 14.25 ಕೋಟಿ ರುಪಾಯಿ ಜೇಬಿಗಿಳಿಸಿಕೊಳ್ಳುವ ಮ್ಯಾಕ್ಸ್‌ವೆಲ್ ಅವರಿಂದ ಆರ್‌ಸಿಬಿ ದೊಡ್ಡ ನಿರೀಕ್ಷೆಯಿಟ್ಟಿತ್ತು. ಕಳೆದೆರಡು ಆವೃತ್ತಿಗಳಲ್ಲಿ ಬೇಜವಾಬ್ದಾರಿ ಆಟವಾಡಿರುವ ಮ್ಯಾಕ್ಸಿಗೆ ಗೇಟ್‌ಪಾಸ್ ಗ್ಯಾರಂಟಿ.
1. ಕರ್ಣ್ ಶರ್ಮಾ:
ಆರ್‌ಸಿಬಿ ತಂಡದ ಹಿರಿಯ ಲೆಗ್‌ಸ್ಪಿನ್ನರ್ ಕರ್ಣ್ ಶರ್ಮಾ, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸಾಧಾರಣ ಪ್ರದರ್ಶನ ತೋರಿದ್ದರು. ಆರ್‌ಸಿಬಿ ಪರ 9 ಪಂದ್ಯಗಳನ್ನಾಡಿ 254 ರನ್ ನೀಡಿ 7 ವಿಕೆಟ್ ಗಳಿಸಲಷ್ಟೇ ಶಕ್ತರಾಗಿದ್ದರು.
ಸರಾಸರಿ 10.58ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು ಕರ್ಣ್ ಶರ್ಮಾ ದುಬಾರಿಯಾಗಿದ್ದರು. ಈಗಾಗಲೇ 36 ವರ್ಷದ ಕರ್ಣ್ ಶರ್ಮಾ ಅವರನ್ನು ಮುಂದಿನ ವರ್ಷಕ್ಕೆ ಆರ್‌ಸಿಬಿ ರೀಟೈನ್ ಮಾಡಿಕೊಳ್ಳುವುದು ಅನುಮಾನ ಎನಿಸಿದೆ.