17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಸಾಧಾರಣ ಪ್ರದರ್ಶನದ ಮೂಲಕ ಪ್ಲೇ ಆಫ್ ಪ್ರವೇಶಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಮುಗ್ಗರಿಸುವ ಮೂಲಕ ತನ್ನ ಅಭಿಯಾನ ಮುಗಿಸಿದೆ.
2024ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿನ ಆರ್‌ಸಿಬಿ ತಂಡದ ಪ್ರದರ್ಶನ ಯಾವ ಸಿನಿಮಾ ಸ್ಟೋರಿಗೂ ಕಮ್ಮಿ ಇರಲಿಲ್ಲ. ಯಾಕೆಂದರೆ ತಾನಾಡಿದ ಮೊದಲ 8 ಪಂದ್ಯಗಳ ಪೈಕಿ 7 ಪಂದ್ಯಗಳನ್ನು ಸೋತು ಬಹುತೇಕ ಪ್ಲೇ ಆಫ್ ರೇಸ್‌ನಿಂದಲೇ ಹೊರಬೀಳುವ ಭೀತಿಗೆ ಸಿಲುಕಿತ್ತು.
ಆದರೆ ಇದಾದ ಬಳಿಕ ಸತತ ಆರು ಪಂದ್ಯಗಳನ್ನು ರೋಚಕವಾಗಿ ಜಯಿಸುವ ಮೂಲಕ ಹಲವು ಕ್ರಿಕೆಟ್ ಪಂಡಿತರ ಲೆಕ್ಕಾಚಾರಗಳನ್ನು ತಲೆಕೆಳಗಾಗುವಂತೆ ಮಾಡಿ ಪ್ಲೇ ಆಫ್‌ಗೆ ಲಗ್ಗೆಯಿಡುವ ಮೂಲಕ ಅಭಿಮಾನಿಗಳನ್ನು ಖುಷಿಪಡಿಸಿತ್ತು.
ಇನ್ನು ಆರ್‌ಸಿಬಿ ತಂಡದ ಪ್ರದರ್ಶನದ ಬಗ್ಗೆ ಅಂಬಟಿ ರಾಯುಡು, ತುಷಾರ್ ದೇಶಪಾಂಡೆ ಅವರಂತಹ ಆಟಗಾರರು ಉರಿದುಕೊಂಡಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ಈ ಇಬ್ಬರು ಆಟಗಾರರು ಆರ್‌ಸಿಬಿ ಸೋಲನ್ನು ಸಂಭ್ರಮಿಸಿದ್ದರು.
ಆದರೆ ಲಖನೌ ಸೂಪರ್ ಜೈಂಟ್ಸ್ ತಂಡದ ಸ್ಪೋಟಕ ಬ್ಯಾಟರ್ ನಿಕೋಲಸ್ ಪೂರನ್, ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವು ತೋರಿದ ಕೆಚ್ಚೆದೆಯ ಹೋರಾಟದ ಬಗ್ಗೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ ಮೆಚ್ಚುಗೆಯ ಪೋಸ್ಟ್ ಹಾಕಿದ್ದಾರೆ.
ಆರ್‌ಸಿಬಿ ತಂಡದ ಫೋಟೋ ಜತೆಗೆ, "ಸಣ್ಣ ನಂಬಿಕೆಯೊಂದಿದ್ದರೇ ಏನು ಬೇಕಾದರೂ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಧನ್ಯವಾದಗಳು" ಎಂದು ನಿಕೋಲಸ್ ಪೂರನ್ ಪೋಸ್ಟ್ ಮಾಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆರಂಭದಲ್ಲಿ ಸತತ 6 ಪಂದ್ಯಗಳನ್ನು ಸೋತಿತ್ತು. ಆಗ ಹಲವು ಕ್ರಿಕೆಟ್ ಪಂಡಿತರು ಆರ್‌ಸಿಬಿ ಪ್ಲೆ ಆಫ್‌ಗೇರುವುದು 1% ಅಷ್ಟೇ ಸಾಧ್ಯ, 99 ಸಾಧ್ಯವೇ ಇಲ್ಲ ಎಂದು ಷರಾ ಬರೆದಿದ್ದರು.
ಆದರೆ ಆರ್‌ಸಿಬಿ ತಂಡವು ಆ 1% ನಂಬಿಕೆಯನ್ನೇ ನೆಚ್ಚಿಕೊಂಡು ಘಟಾನುಘಟಿ ತಂಡಗಳನ್ನು ಬಗ್ಗುಬಡಿಯುವ ಮೂಲಕ ಆರ್‌ಸಿಬಿ ತಂಡವು ಎಲ್ಲಾ ಸವಾಲು ಮೆಟ್ಟಿ ನಿಂತು ಪ್ಲೇ ಆಫ್‌ಗೇರುವಲ್ಲಿ ಯಶಸ್ವಿಯಾಗಿತ್ತು.
ಇನ್ನು ಲೀಗ್ ಹಂತದಲ್ಲಿ ತೋರಿದ್ದ ಅತ್ಯಮೋಘ ಪ್ರದರ್ಶನವನ್ನು ನಾಕೌಟ್ ಹಂತದಲ್ಲಿ ಮರುಕಳಿಸಲು ಆರ್‌ಸಿಬಿಗೆ ಸಾಧ್ಯವಾಗಲಿಲ್ಲ. ಆದರೆ ಆರ್‌ಸಿಬಿ ತಂಡದ ಈ ಹೋರಾಟ, ಹಲವು ತಂಡಗಳಿಗೆ ಸ್ಪೂರ್ತಿಯಾಗಲಿದೆ ಎಂದರೆ ಅತಿಶಯೋಕ್ತಿಯಾಗಲಾರದು.