IPL 2024 ಆರ್‌ಸಿಬಿಗೆ ಅರ್ಧದಲ್ಲೇ ಕೈಕೊಟ್ಟ ಮ್ಯಾಕ್ಸ್‌ವೆಲ್‌..! ಆದ್ರೂ ಒಂದು ಮಾತು ಕೊಟ್ಟ ಸ್ಟಾರ್ ಆಲ್ರೌಂಡರ್

First Published | Apr 16, 2024, 12:48 PM IST

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಸೋಲುಗಳಿಂದ ಕಂಗೆಟ್ಟಿದೆ. ಇದೆಲ್ಲದರ ನಡುವೆ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್‌, ಆರ್‌ಸಿಬಿಯಿಂದ ಅನಿರ್ದಿಷ್ಟಾವಧಿಗೆ ವಿಶ್ರಾಂತಿಗೆ ಜಾರಿದ್ದಾರೆ. ಹೀಗಿದ್ದೂ ತಂಡಕ್ಕಾಗಿ ಒಂದು ಮಾತುಕೊಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹೊಸ ಹುರುಪಿನೊಂದಿಗೆ ಪಾಲ್ಗೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ.

ಆರ್‌ಸಿಬಿ ತಂಡದ ಸತತ ಸೋಲು ಒಂದು ಕಡೆಯಾದರೆ, ತಂಡದ ಸ್ಟಾರ್ ಆಟಗಾರರೆನಿಸಿಕೊಂಡಿರುವ ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೋನ್ ಗ್ರೀನ್, ಮೊಹಮ್ಮದ್, ಅಲ್ಜಾರಿ ಜೋಸೆಫ್ ಅವರಂತಹ ಆಟಗಾರರು ನೀರಸ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಹೊರೆ ಎನಿಸಿದ್ದಾರೆ.

Tap to resize

ಇದೆಲ್ಲದರ ನಡುವೆ ಇದೀಗ, ಆಸೀಸ್ ಮೂಲದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್, ಟೂರ್ನಿಯ ಅರ್ಧದಲ್ಲೇ ಅನಿರ್ದಿಷ್ಟಾವಧಿಗೆ ತಂಡದಿಂದ ಹೊರಗುಳಿಯುವ ಅಚ್ಚರಿಯ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಆರ್‌ಸಿಬಿ ತಂಡವು ಸನ್‌ರೈಸರ್ಸ್ ಹೈದರಾಬಾದ್ ಎದುರು ಸೋಲು ಕಂಡ ಬೆನ್ನಲ್ಲೇ ಈ ವಿಚಾರ ಬೆಳಕಿಗೆ ಬಂದಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮ್ಯಾಕ್ಸಿ, ಆರ್‌ಸಿಬಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ.

ಈ ಕುರಿತಂತೆ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಮಾತನಾಡಿರುವ ಮ್ಯಾಕ್ಸ್‌ವೆಲ್, ಸದ್ಯದ ಮಟ್ಟಿಗಂತೂ ನಾನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಧೃಡವಾಗಿದ್ದೇನೆ ಎಂದೆನಿಸುತ್ತಿಲ್ಲ. ಈ ಕಾರಣಕ್ಕಾಗಿ ನಾನು ಅನಿರ್ದಿಷ್ಟಾವಧಿಗೆ ಬ್ರೇಕ್ ಪಡೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಕಳೆದ ಪಂದ್ಯದಲ್ಲಿ ನಾವು ಸೋಲು ಅನುಭವಿಸಿದ ಬೆನ್ನಲ್ಲೇ, ನಾನು ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಹಾಗೂ ಕೋಚ್ ಬಳಿ ಹೋಗಿ, ನನ್ನ ಬದಲಿಗೆ ಬೇರೆಯವರಿಗೆ ಅವಕಾಶ ನೀಡಲು ಇದು ಸರಿಯಾದ ಸಮಯ ಎನಿಸುತ್ತಿದೆ. ಸದ್ಯದ ಮಟ್ಟಿಗೆ ನಾನು ವಿಶ್ರಾಂತಿ ಪಡೆಯುತ್ತೇನೆ. ನನ್ನ ಬದಲಿಗೆ ಬೇರೆಯವರಿಗೆ ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡಿದ್ದೇನೆ ಎಂದು ಮ್ಯಾಕ್ಸಿ ಹೇಳಿದ್ದಾರೆ.

ಇನ್ನು ಇದೇ ವೇಳೆ, "ನಾನು ಆಡಲು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಿದ್ದವಾಗಿದ್ದೇನೆ ಎಂದು ಅನಿಸಿದರೆ ಹಾಗೂ ತಂಡಕ್ಕೆ ನಿಜಕ್ಕೂ ನನ್ನ ಅಗತ್ಯವಿದ್ದರೆ ಖಂಡಿತವಾಗಿಯೂ ತಂಡಕ್ಕೆ ಕಮ್‌ಬ್ಯಾಕ್ ಮಾಡುತ್ತೇನೆ" ಎನ್ನುವ ಭರವರೆಯನ್ನು ಮ್ಯಾಕ್ಸಿ ನೀಡಿದ್ದಾರೆ.

2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಮೊದಲ 6 ಪಂದ್ಯಗಳನ್ನಾಡಿ ಕೇವಲ 32 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಮ್ಯಾಕ್ಸಿ ಮೂರು ಇನಿಂಗ್ಸ್‌ಗಳಲ್ಲಿ ಶೂನ್ಯ ಸುತ್ತಿದರೆ, ಒಮ್ಮೆ ಮಾತ್ರ 28 ರನ್ ಗಳಿಸಿದ್ದಾರೆ.

ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ 7 ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಹಾಗೂ 6 ಸೋಲುಗಳೊಂದಿಗೆ 2 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆರ್‌ಸಿಬಿ ಪ್ಲೇ ಆಫ್‌ ಪ್ರವೇಶಿಸಬೇಕಿದ್ದರೆ, ಇನ್ನು ಲೀಗ್ ಹಂತದ ಎಲ್ಲಾ 7 ಪಂದ್ಯಗಳಲ್ಲಿ ಜಯ ದಾಖಲಿಸಬೇಕಿದೆ. 

Latest Videos

click me!