ಭಾರತ ಸೇರಿದಂತೆ ಇಡೀ ವಿಶ್ವವೇ ಜನವರಿ 22ರ ಸೋಮವಾರವನ್ನು ಕಾತರದಿಂದ ಎದುರು ನೋಡುತ್ತಿದೆ. ಆ ದಿನ ಅಯೋಧ್ಯೆಯ ನೂತನ ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ.
ಈ ಮಹತ್ವದ ಸಮಾರಂಭಕ್ಕೆ ಇಡೀ ಅಯೋಧ್ಯ ನಗರವೇ ಭವ್ಯ ರೀತಿಯಲ್ಲಿ ಸಜ್ಜಾಗಿದೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ರಾಮ ಮಂದಿರದ ಟ್ರಸ್ಟ್ ಅಧಿಕೃತರು ತಾರಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡಿದ್ದಾರೆ. ಜೊತೆಗೆ ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ ಅವರಿಗೂ ಟ್ರಸ್ಟ್‌ನ ಸದಸ್ಯರು ಅಧಿಕೃತ ಆಹ್ವಾನ ನೀಡಿದ್ದಾರೆ.
ಅಯೋಧ್ಯೆಯ ನೂತನ ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ‘ಕ್ರಿಕೆಟ್ ದೇವರು’ ಸಚಿನ್ ತೆಂಡುಲ್ಕರ್ ಕೂಡಾ ಪಾಲ್ಗೊಳ್ಳಲಿದ್ದಾರೆ. ಅವರಿಗೂ ಅಧಿಕೃತ ಆಹ್ವಾನ ನೀಡಲಾಗಿದೆ.
ಇದೆಲ್ಲದರ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನೀಶ್ ಕನ್ಹೇರಿಯಾ ಕೂಡಾ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಸಮಾರಂಭದ ಕುರಿತಂತೆ ಸಾಕಷ್ಟು ಉತ್ಸಾಹಿತರಾದಂತೆ ಕಂಡು ಬರುತ್ತಿದೆ.
ಕನ್ಹೇರಿಯಾ ಜನವರಿ 14ರಂದು ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಟೋ ಶೇರ್ ಮಾಡಿದ್ದಾರೆ. ಅದರಲ್ಲಿ ಕೇಸರಿ ಧ್ವಜ ಹಿಡಿದಿರುವ ಕನ್ಹೇರಿಯಾ, ಪಾಕ್ ನೆಲದಲ್ಲಿ ಜೈ ಶ್ರೀರಾಮನ ಘೋಷಣೆ ಕೂಗಿದ್ದಾರೆ.
ಇದೇ ಪೋಸ್ಟ್‌ನಲ್ಲಿ ಕನ್ಹೇರಿಯಾ, ನಮ್ಮ ರಾಜ ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗಿದೆ. ಇನ್ನು ಕೇವಲ 8 ದಿನಗಳಷ್ಟೇ ಬಾಕಿ ಉಳಿದಿದೆ. ಬೋಲೋ ಜೈ ಶ್ರೀರಾಮ್ ಎಂದು ಪಾಕ್ ಮಾಜಿ ಕ್ರಿಕೆಟಿಗ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಅನಿಲ್ ದಲಪತ್ ಬಳಿಕ ಪಾಕಿಸ್ತಾನ ಪರ ಕ್ರಿಕೆಟ್ ಆಡಿದ ಎರಡನೇ ಹಿಂದು ಎನ್ನುವ ಕೀರ್ತಿಗೆ ದಾನೇಶ್ ಕನ್ಹೇರಿಯಾ ಪಾತ್ರರಾಗಿದ್ದರು. ಕನ್ಹೇರಿಯಾ ಪಾಕಿಸ್ತಾನ ಪರ 61 ಟೆಸ್ಟ್ ಹಾಗೂ 18 ಏಕದಿನ ಪಂದ್ಯಗಳನ್ನಾಡಿದ್ದಾರೆ.