ಭಾರತದಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ ರೀತಿಯಲ್ಲಿ ಆಸ್ಟ್ರೇಲಿಯಾದಲ್ಲಿ ಬಿಗ್‌ಬ್ಯಾಶ್ ಟಿ20 ಕ್ರಿಕೆಟ್ ಟೂರ್ನಿಯು ನಡೆಯುತ್ತದೆ. ಭಾರತೀಯ ಆಟಗಾರರನ್ನು ಹೊರತುಪಡಿಸಿ ಜಗತ್ತಿನ ಹಲವು ತಾರಾ ಕ್ರಿಕೆಟಿಗರು ಈ ಹೊಡಿ ಬಡಿ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಈ ಬಾರಿ ಬಿಬಿಎಲ್ ಕ್ರಿಕೆಟ್ ಆಟಕ್ಕೆ ಬದಲಾಗಿ ಮತ್ತೊಂದು ಹೊಸ ವಿಚಾರಕ್ಕೆ ಸುದ್ದಿಯಾಗುತ್ತಿದೆ.
ಹೌದು, ಭಾರತೀಯ ಮೂಲದ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರ್ತಿ ಇಶಾ ಗುಹಾ ಆಡಿದ ಒಂದು ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇಶಾ ಆಡಿದ ಒಂದು ಮಾತಿಗೆ ಸಹ ಕಾಮೆಂಟೇಟರ್ಸ್ ಬಿದ್ದುಬಿದ್ದು ನಕ್ಕಿದ್ದಾರೆ.
ಖ್ಯಾತ ಕ್ರಿಕೆಟ್ ಕಾಮೆಂಟೇಟರ್ ಹಲವು ಪ್ರತಿಷ್ಠಿತ ಕ್ರಿಕೆಟ್ ಟೂರ್ನಿಗಳಲ್ಲಿ ತಮ್ಮ ಕಂಚಿನ ಕಂಠದ ಮೂಲಕ ವೀಕ್ಷಕ ವಿವರಣೆ ನೀಡಿ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ್ದಾರೆ. ಅದೇ ರೀತಿ ಬಿಗ್‌ಬ್ಯಾಶ್ ಲೀಗ್ ಟೂರ್ನಿಯಲ್ಲಿ ಕಾಮೆಂಟ್ರಿ ಮಾಡುವ ಭರದಲ್ಲಿ ಆಡಿದ ಒಂದು ಡಬಲ್ ಮೀನಿಂಗ್ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಬಿಗ್‌ಬ್ಯಾಶ್ ಪಂದ್ಯವೊಂದರ ವೇಳೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಡಂ ಗಿಲ್‌ಕ್ರಿಸ್ಟ್, ಮಾಜಿ ಕ್ರಿಕೆಟಿಗ ಕೆರ್ರಿ ಓ ಕೀಫ್ ಜತೆ ಇಶಾ ಗುಹಾ ಕಾಮೆಂಟ್ರಿ ಮಾಡುತ್ತಿದ್ದರು. ಈ ವೇಳೆ ಮಾಜಿ ಸ್ಪಿನ್ನರ್ ಕೆರ್ರಿ, ಕೇರಂ ಬೌಲಿಂಗ್ ಕುರಿತಂತೆ ವಿವರಣೆ ನೀಡುತ್ತಿದ್ದರು.
ಕ್ರಿಕೆಟ್ ಕೋಚ್‌ಗಳು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡುವಾಗ, ನೀವು ಬೌಲಿಂಗ್ ಮಾಡುವ ಕೈಗಳನ್ನು ಮುಂದೆ ಮಾಡಿ ತೋರಿಸಿ ಎನ್ನುತ್ತಿದ್ದರು. ಮಧ್ಯದ ಬೆರಳು ಉದ್ದವಿರುವ ಬೌಲರ್‌ಗಳನ್ನು ಕೇರಂ ಬೌಲರ್ ಆಗಿ ಆರಿಸುತ್ತಿದ್ದರು ಎಂದು ಕೆರ್ರಿ ಓ ಕೀಫ್ ವಿವರಿಸುತ್ತಿದ್ದರು.
ಈ ವಿವರಣೆ ಮುಗಿಯುತ್ತಿದ್ದಂತೆಯೇ ತಕ್ಷಣ ಪ್ರತಿಕ್ರಿಯಿಸಿದ ಇಶಾ ಗುಹಾ ನಿಮ್ಮದು ಹೇಗಿದೆ? ಎಂದು ಪ್ರಶ್ನಿಸಿದ್ದಾರೆ. ಈ ಡಬಲ್ ಮೀನಿಂಗ್ ಅರ್ಥೈಸಿಕೊಂಡ ಕೆರ್ರಿ ಜೋರಾಗಿ ನಕ್ಕಿದ್ದಾರೆ. ಬಳಿಕ ಸ್ವತಃ ಇಶಾ ಗುಹಾ ಜೋರಾಗಿ ನಕ್ಕಿದ್ದಾರೆ. ಇನ್ನು ಗಿಲ್ಲಿ ನಗು ತಡೆದುಕೊಂಡು ವೀಕ್ಷಕ ವಿವರಣೆಯತ್ತ ಗಮನ ಹರಿಸಿದರು. ಈ ವಿಡಿಯೋ ವೈರಲ್ ಆಗಿದೆ.
ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಮಾಜಿ ವೇಗಿಯಾಗಿರುವ ಇಶಾ ಗುಹಾ, ಆಂಗ್ಲರ ಪರ 8 ಟೆಸ್ಟ್, 83 ಏಕದಿನ ಹಾಗೂ 22 ಟಿ20 ಪಂದ್ಯಗಳನ್ನು ಆಡಿದ್ದು ಒಟ್ಟಾರೆ 148 ವಿಕೆಟ್ ಕಬಳಿಸಿದ್ದಾರೆ. ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಬಳಿಕ ಇಶಾ ಗುಹಾ ವೀಕ್ಷಕ ವಿವರಣೆಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.