Ashes 2021: ಅಡಿಲೇಡ್ ಟೆಸ್ಟ್‌ನಿಂದ ಹೊರಬಿದ್ದ ಪ್ಯಾಟ್ ಕಮಿನ್ಸ್‌, ಸ್ಟೀವ್ ಸ್ಮಿತ್‌ಗೆ ನಾಯಕ ಪಟ್ಟ..!

First Published Dec 16, 2021, 9:08 AM IST

ಅಡಿಲೇಡ್‌: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (Australia vs England) ನಡುವಿನ ಆ್ಯಷಸ್ ಟೆಸ್ಟ್ ಸರಣಿಯ (Ashes Test Series) ಎರಡನೇ ಟೆಸ್ಟ್‌ ಪಂದ್ಯ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ನೂತನ ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್‌ (Pat Cummins) ಅಡಿಲೇಡ್‌ ಟೆಸ್ಟ್ (Adelaide Test) ಪಂದ್ಯದಿಂದ ಹೊರಬಿದ್ದಿದ್ದಾರೆ. ಕೋವಿಡ್‌ ಸೋಂಕಿತನೊಂದಿಗೆ ಕಮಿನ್ಸ್‌ ಪ್ರಾಥಮಿಕ ಸಂಪರ್ಕ ಹೊಂದಿದ್ದರಿಂದ ಕಮಿನ್ಸ್‌ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಹೀಗಾಗಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ (Steve Smith) ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ನಡುವಿನ ಎರಡನೇ ಟೆಸ್ಟ್ ಪಂದ್ಯವು ಡಿಸೆಂಬರ್ 16ರಿಂದ ಆರಂಭವಾಗಲಿದ್ದು, ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಅಡಿಲೇಡ್‌ ಕ್ರಿಕೆಟ್‌ ಮೈದಾನ ಆತಿಥ್ಯವನ್ನು ವಹಿಸಿದೆ. ಹೀಗಿರುವಾಗಲೇ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ.
 

ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್‌ ತಂಡದ ನೂತನ ನಾಯಕ ಪ್ಯಾಟ್ ಕಮಿನ್ಸ್‌, ರೆಸ್ಟೋರೆಂಟ್ ಸಿಬ್ಬಂದಿಯೊಬ್ಬರ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದು, ಆ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಐಸೋಲೇಷನ್‌ನಲ್ಲಿಡಲಾಗಿದೆ.
 

ಹೀಗಾಗಿ 2018ರ ಬಳಿಕ ಮತ್ತೊಮ್ಮೆ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ಟೆಸ್ಟ್‌ ತಂಡದ ನಾಯಕರಾಗಿ ಕಾಂಗರೂ ಪಡೆಯನ್ನು ಮುನ್ನಡೆಸಲಿದ್ದಾರೆ. 2018ರ ಕೇಪ್‌ ಟೌನ್ ಟೆಸ್ಟ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ಮಾಡಿದ ತಪ್ಪಿಗಾಗಿ ಸ್ಟೀವ್ ಸ್ಮಿತ್ ಒಂದು ವರ್ಷ ನಿಷೇಧಕ್ಕೊಳಗಾಗಿದ್ದಲ್ಲದೇ, ನಾಯಕತ್ವವನ್ನು ಕಳೆದುಕೊಂಡಿದ್ದರು.

ಪ್ಯಾಟ್ ಕಮಿನ್ಸ್‌ ಉಳಿದುಕೊಂಡ ಹೋಟೆಲ್‌ನಲ್ಲೇ ಸ್ಪಿನ್ನರ್ ನೇಥನ್ ಲಯನ್ ಕೂಡಾ ಉಳಿದುಕೊಂಡಿದ್ದರು. ಆದರೆ ಅವರಿದ್ದ ಟೇಬಲ್‌ಗೆ ಬೇರೆಯವರು ಸರ್ವ್ ಮಾಡಿದ್ದರು. ಇನ್ನು ಇವರಿಬ್ಬರ RT-PCR ಟೆಸ್ಟ್ ನೆಗೆಟಿವ್ ಬಂದಿದ್ದರೂ ಸಹಾ, ಕಮಿನ್ಸ್‌ಗೆ ವಿಶ್ರಾಂತಿ ನೀಡಲಾಗಿದ್ದು, ಲಯನ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಆಡಲು ಅವಕಾಶ ಕಲ್ಪಿಸಲಾಗಿದೆ. 

ಇದೀಗ ಉಪನಾಯಕರಾಗಿದ್ದ ಸ್ಟೀವ್ ಸ್ಮಿತ್ ನಾಯಕರಾಗಿ ಆಯ್ಕೆಯಾಗಿದ್ದರೇ, ಟ್ರಾವಿಸ್ ಹೆಡ್‌ ಉಪನಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಪ್ಯಾಟ್ ಕಮಿನ್ಸ್‌ ಬದಲಿಗೆ ಮಿಚೆಲ್ ನೀಸರ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಈಗಾಗಲೇ ಗಾಯದ ಸಮಸ್ಯೆಯಿಂದ ಆಸ್ಟ್ರೇಲಿಯಾದ ಮಾರಕ ವೇಗಿ ಜೋಶ್ ಹೇಜಲ್‌ವುಡ್‌ ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಇನ್ನು ಗಾಬಾ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ ಕಬಳಿಸಿ ಮಿಂಚಿದ್ದ ಕಮಿನ್ಸ್‌ ಕೂಡಾ ತಂಡದಿಂದ ಹೊರಗುಳಿದಿದ್ದು, ಆಸೀಸ್‌ ಪಡೆಗೆ ಹಿನ್ನೆಡೆಯಾಗಿವ ಸಾಧ್ಯತೆಯಿದೆ.

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ತಂಡಗಳ ನಡುವಿನ 5 ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 9 ವಿಕೆಟ್‌ಗಳ ಜಯ ಸಾಧಿಸುವ ಮೂಲಕ 1-0 ಯಲ್ಲಿ ಮುನ್ನಡೆ ಸಾಧಿಸಿದೆ.

click me!