ತೆರೆಗೆ ಅಪ್ಪಳಿಸಲಿದೆ ಸೌರವ್ ಗಂಗೂಲಿ ಬಯೋಪಿಕ್‌; ಇಲ್ಲಿವೆ ನೋಡಿ ದಾದಾ ಸಿನಿಮಾದ ಇಂಟ್ರೆಸ್ಟಿಂಗ್ ಕಹಾನಿ

First Published | Sep 9, 2021, 4:22 PM IST

ನವದೆಹಲಿ: ಭಾರತ ಕ್ರಿಕೆಟ್ ಕಂಡಂತಹ ಅತ್ಯಂತ ಯಶಸ್ವಿ ನಾಯಕರಲ್ಲಿ ಸೌರವ್ ಗಂಗೂಲಿ ಕೂಡಾ ಒಬ್ಬರು. ತಮ್ಮ ಕೆಚ್ಚೆದೆಯ ನಾಯಕತ್ವ ಹಾಗೂ ಸ್ಪೋಟಕ ಬ್ಯಾಟಿಂಗ್ ಮೂಲಕ ದಾದಾ ಭಾರತ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಹಾಲಿ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್‌ ಗಂಗೂಲಿ ಜೀವಾನಾಧಾರಿತ ಚಿತ್ರ ತೆರೆಕಾಣಲು ಸಿದ್ದವಾಗುತ್ತಿದೆ. ದಾದಾ ಬಯೋಪಿಕ್‌ ಲೌ ಫಿಲ್ಮ್ಸ್‌ ನ ಲೌ ರಂಜನ್ ಮತ್ತು ಅಂಕುರ್ ಗರ್ಗ್‌ ನಿರ್ಮಿಸುತ್ತಿದ್ದಾರೆ.
 

ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್‌ ಪಾಲಿಗೆ ದಿಗ್ಗಜ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಸದ್ಯ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯದಲ್ಲಿಯೇ ದಾದಾ ಅಭಿಮಾನಿಗಳು ದೊಡ್ಡ ತೆರೆಯ ಮೇಲೆ ಗಂಗೂಲಿ ಜೀವನಾಧಾರಿತ ಚಿತ್ರವನ್ನು ಕಣ್ತುಂಬಿಕೊಳ್ಳಲಿದ್ದಾರೆ.
 

ಗುರುವಾರ(ಸೆ.09) ಲೌ ಫಿಲ್ಮ್ಸ್‌ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಜೀವನಾಧಾರಿತ ಚಿತ್ರ ನಿರ್ಮಿಸುತ್ತಿರುವುದಾಗಿ ಘೋಷಿಸಿದೆ. 1990ರ ದಶಕದಲ್ಲಿ ಸೌರವ್ ಗಂಗೂಲಿ ಹಲವು ಯುವ ಕ್ರಿಕೆಟಿಗರ ಪಾಲಿಗೆ ದಾದಾ ಸ್ಪೂರ್ತಿಯ ಚಿಲುಮೆಯಾಗಿದ್ದರು.

Tap to resize

ಸೌರವ್‌ ಗಂಗೂಲಿ ಕ್ರಿಕೆಟ್‌ ಕಾಶಿ ಎನಿಸಿಕೊಂಡಿರುವ ಲಾರ್ಡ್ಸ್‌ ಮೈದಾನದಲ್ಲಿ ತಾವಾಡಿದ ಪಾದಾರ್ಪಣೆ ಟೆಸ್ಟ್‌ ಪಂದ್ಯದಲ್ಲೇ ಶತಕ ಬಾರಿಸಿ ಗಮನ ಸೆಳೆದಿದ್ದರು. ಇದಾದ ಬಳಿಕ ಟೀಂ ಇಂಡಿಯಾದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡ ಸೌರವ್‌, ಬಳಿಕ ಟೀಂ ಇಂಡಿಯಾ ನಾಯಕನಾಗಿಯೂ ಆಯ್ಕೆಯಾಗಿದ್ದರು.

2002ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ನಾಟ್‌ವೆಸ್ಟ್ ಏಕದಿನ ಸರಣಿಯಲ್ಲಿ ಸೌರವ್‌ ಗಂಗೂಲಿ ಪಡೆ ಗೆಲುವಿನ ನಗೆ ಬೀರಿತ್ತು. ಇದೇ ಖುಷಿಯಲ್ಲಿ ದಾದಾ ಲಾರ್ಡ್ಸ್‌ ಬಾಲ್ಕನಿಯಲ್ಲಿ ನಿಂತು ತಮ್ಮ ಜೆರ್ಸಿ ಬಿಚ್ಚಿ ಗಾಳಿಯಲ್ಲಿ ಬೀಸಿ ಸಂಭ್ರಮಾಚರಣೆ ಮಾಡಿದ್ದರು. ಇದು ಭಾರತ ಕ್ರಿಕೆಟ್ ಇತಿಹಾಸದಲ್ಲಿ ಐತಿಹಾಸಿಕ ಕ್ಷಣಗಳಲ್ಲಿ ಒಂದು ಎನಿಸಿದೆ.

ಇನ್ನು 2002ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಸೌರವ್ ಗಂಗೂಲಿ ನೇತೃತ್ವದ ಟೀಂ ಇಂಡಿಯಾ, ಲಂಕಾ ಜತೆ ಜಂಟಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 2003ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದಾದಾ ಪಡೆ ರನ್ನರ್ ಅಪ್ ಸ್ಥಾನ ಪಡೆದಿತ್ತು. 

ಗ್ರೆಗ್‌ ಚಾಪೆಲ್‌ ಟೀಂ ಇಂಡಿಯಾ ಕೋಚ್‌ ಆದ ನಂತರ 2006ರ ಬಳಿಕ ಸೌರವ್ ಗಂಗೂಲಿ ಕ್ರಿಕೆಟ್‌ ಬದುಕು ಮಸುಕಾಗ ತೊಡಗಿತು. 2007ರಲ್ಲಿ ಸೌರವ್ ಟೀಂ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡಿ, 2008ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು.

ಇದೇ ವೇಳೆ ಸೌರವ್‌ ಗಂಗೂಲಿ ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ಹಾಗೂ ವಿವಾದಾತ್ಮಕ ನಾಯಕನೆಂದು ಗುರುತಿಸಿಕೊಂಡಿದ್ದಾರೆ. ಇದೀಗ ದಾದಾ ಜೀವನಾಧಾರಿತ ಚಿತ್ರಕ್ಕೆ ಸಿದ್ದತೆ ಆರಂಭವಾಗಿದ್ದು ಲೌ ಫಿಲ್ಮ್ಸ್‌ ನಿರ್ಮಾಣ ಮಾಡುತ್ತಿದೆ. ಸೌರವ್‌ ಗಂಗೂಲಿ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವ ಕುತೂಹಲಕ್ಕೆ ಇನ್ನು ಉತ್ತರ ಸಿಕ್ಕಿಲ್ಲ.

ಲೌ ಫಿಲ್ಮ್ಸ್‌ ಭಾರತದ ಅತ್ಯಂತ ಪ್ರಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆಯಾಗಿದೆ. ಲೌ ಫಿಲ್ಮ್ಸ್‌ನವರು ಈಗಾಗಲೇ ಸೋನು ಕೆ ಟಿಟು ಕಿ ಸ್ವೀಟಿ,  ದೇ ದೇ ಪ್ಯಾರ್ ದೇ, ಮಲಾಂಗ್ ಅಂಡ್‌ ಚಲಾಂಗ್‌ ನಂತಹ ಚಿತ್ರಗಳನ್ನು ನಿರ್ಮಿಸಿದೆ. ಇದಷ್ಟೇ ಅಲ್ಲದೇ ರಂಜನ್‌ ನಿರ್ದೇಶನದ ಕುತ್ತೇ ಮತ್ತು ಉಫ್‌ ಚಿತ್ರಗಳು ತೆರೆಕಾಣಲು ಸಿದ್ದವಾಗಿದೆ.

Latest Videos

click me!