ಐಪಿಎಲ್ ಟೂರ್ನಿ 2ನೇ ಭಾಗದ ಆರಂಭಕ್ಕೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಸೆಪ್ಟೆಂಬರ್ 19ರಿಂದ ದುಬೈನಲ್ಲಿ 2021ರ ಐಪಿಎಲ್ ಟೂರ್ನಿ ಮುಂದುವರಿಯಲಿದೆ. ಇದಕ್ಕಾಗಿ ಇದೀಗ 8 ಫ್ರಾಂಚೈಸಿಗಳು ತಯಾರಿ ಆರಂಭಿಸಿದೆ. ಈಗಾಗಲೇ ಪ್ರಮುಖ ಆಟಗಾರರು ದುಬೈ ಸೇರಿಕೊಂಡಿದ್ದಾರೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೂಪರ್‌ಮ್ಯಾನ್ ಎಬಿ ಡಿವಿಲಿಯರ್ಸ್ ದುಬೈ ತಲುಪಿದ್ದಾರೆ.
ಎಬಿ ಡಿವಿಲಿಯರ್ಸ್ ಹಾಗೂ ಕುಟುಂಬಕ್ಕೆ ದುಬೈನಲ್ಲಿ ಅದ್ಧೂರಿ ಸ್ವಾಗತ ನೀಡಲಾಗಿದೆ. ಎಬಿಡಿ , ಪತ್ನಿ ಹಾಗೂ ಮಕ್ಕಳೊಂದಿಗೆ ದುಬೈಗೆ ಬಂದಿಳಿದಿದ್ದಾರೆ. ಮಕ್ಕಳಿಗೆ ಚಾಕೋಲೇಟ್ ಸೇರಿದಂತೆ ಹಲವು ಸಿಹಿ ತಿನಿಸುಗಳನ್ನು ನೀಡಿ ಸ್ವಾಗತಿಸಲಾಗಿದೆ.
ಹೊಟೆಲ್‌ಗೆ ತೆರಳಿದ ಎಬಿಡಿ ಹಾಗೂ ಕುಟುಂಬ ಕ್ವಾರಂಟೈನ್‌ಗೆ ಒಳಗಾಗಿದೆ. ಈ ವೇಳೆ ಎಬಿ ಡಿವಿಲಿಯರ್ಸ್ ಹೋಟೆಲ್ ರೂಂ ಹೊರಭಾಗದ ಫೋಟೋ ಹಂಚಿಕೊಂಡಿದ್ದಾರೆ. ದುಬೈನಲ್ಲಿನ ಸ್ವಾಗತ ಕುರಿತು ಎಬಿಡಿ ಸಂತಸ ಹಂಚಿಕೊಂಡಿದ್ದಾರೆ.
ಐಪಿಎಲ್ ಟೂರ್ನಿ 2021ರ ಮೊದಲ ಭಾಗ ಭಾರತದಲ್ಲಿ ಆಯೋಜನೆಗೊಂಡಿತ್ತು. ಆದರೆ ಆಟಗಾರರಿಗೆ ಕೊರೋನಾ ವಕ್ಕರಿಸಿದ ಕಾರಣ ಐಪಿಎಲ್ ಟೂರ್ನಿ ಸ್ಥಗಿತಗೊಳಿಸಲಾಯಿತು. ಭಾರತದಲ್ಲಿ ಟೂರ್ನಿ ಆಯೋಜನೆ ಸವಾಲಾದ ಕಾರಣ ದುಬೈನಲ್ಲಿ ಸೆಪ್ಟೆಂಬರ್ 19 ರಿಂದ ಟೂರ್ನಿ ನಡೆಯಲಿದೆ.
ಐಪಿಎಲ್ 2021ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ತಯಾರಿ ಆರಂಭಿಸಿದೆ. ಸದ್ಯ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಆರ್‌ಸಿಬಿ ತಂಡದ ಹಲವು ಸದಸ್ಯರು ದುಬೈ ಸೇರಿಕೊಂಡಿದ್ದಾರೆ.
2021ರ ಐಪಿಎಲ್ ಟೂರ್ನಿಯಲ್ಲಿ 7 ಪಂದ್ಯ ಆಡಿರುವ ಆರ್‌ಸಿಬಿ 5 ಗೆಲುವು ಹಾಗೂ 2 ಸೋಲಿನ ಮೂಲಕ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಮಹತ್ತರ ಬದಲಾವಣೆಯೊಂದಿಗೆ ಅಖಾಡಕ್ಕಿಳಿದಿರುವ ಕೊಹ್ಲಿ ಸೈನ್ಯ ಮರೀಚಿಕೆಯಾಗಿರುವ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.
2021ರ ಐಪಿಎಲ್ ಟೂರ್ನಿಯಲ್ಲಿ 7 ಪಂದ್ಯ ಆಡಿರುವ ಎಬಿ ಡಿವಿಲಿಯರ್ಸ್ 207 ರನ್ ಸಿಡಿಸಿದ್ದಾರೆ. ಅಜೇಯ 76 ರನ್ ಈ ಸೀಸನ್‌ಗೆ ವೈಯುಕ್ತಿಕ ಅತ್ಯುತ್ತಮ ಪ್ರದರ್ಶನವಾಗಿದೆ. 51.75ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಎಬಿಡಿ 2 ಅರ್ಧಶತಕ ಸಿಡಿಸಿದ್ದಾರೆ.