ಗಬ್ಬರ್ ಸಿಂಗ್ ಡೈವರ್ಸ್‌: ಮುರಿದು ಬಿದ್ದ ಶಿಖರ್ ಧವನ್‌-ಆಯೆಶಾ ದಾಂಪತ್ಯ ಜೀವನ..!

First Published Sep 8, 2021, 12:23 PM IST

ನವದೆಹಲಿ: ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌, ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್‌ ಹಾಗೂ ಆಯೆಶಾ ಮುಖರ್ಜಿ ವೈವಾಹಿಕ ಜೀವನಕ್ಕೆ ತೆರೆಬಿದ್ದಿದೆ. ಕಳೆದ ಎಂಟು ವರ್ಷಗಳಿಂದ ಸಂಸಾರ ನಡೆಸಿದ್ದ ಈ ಜೋಡಿ ಇದೀಗ ಡೈವರ್ಸ್‌ ಎನ್ನುವ ಚೈನ್‌ ಬ್ರೇಕರ್‌ ಮೊರೆ ಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮೈದಾನದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಇದೀಗ ಬೇರೆ-ಬೇರೆಯಾಗುವ ತೀರ್ಮಾನಕ್ಕೆ ಬಂದಿದ್ದಾರೆ. ಆಯೆಶಾ ಮುಖರ್ಜಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ ಭಾವನಾತ್ಮಕ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
 

ಟೀಂ ಇಂಡಿಯಾ ಎಡಗೈ ಬ್ಯಾಟ್ಸ್‌ಮನ್‌ ಶಿಖರ್ ಧವನ್ ಹಾಗೂ ಆಸ್ಟ್ರೇಲಿಯಾ ಮೂಲದ ಆಯೆಶಾ ಮುಖರ್ಜಿ 2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದಾಗಿ ಬರೋಬ್ಬರಿ 8 ವರ್ಷಗಳ ಬಳಿಕ ಬೇರೆ-ಬೇರೆಯಾಗಲು ತೀರ್ಮಾನಿಸಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಧವನ್ ಪತ್ನಿ ಆಯೆಶಾ, ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದು, ಡೈವರ್ಸ್‌ ಬಗ್ಗೆ ಸುಳಿವು ನೀಡಿದ್ದಾರೆ. ಆದರೆ ಇದುವರೆಗೂ ಶಿಖರ್ ಧವನ್ ಈ ವಿಚಾರದ ಕುರಿತಂತೆ ಇನ್ನೂ ತುಟಿಪಿಟುಕ್ ಎನಿಸಿಲ್ಲ.
 

ಆಯೆಶಾ ಮುಖರ್ಜಿ ಪಾಲಿಗಿದು ಎರಡನೇ ವಿವಾಹ ವಿಚ್ಚೇದನವಾಗಿದೆ. ಈ ಮೊದಲು ಅಸ್ಟ್ರೇಲಿಯಾದ ಉದ್ಯಮಿಯೊಬ್ಬರನ್ನು ಆಯೆಶಾ ವರಿಸಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಆಸ್ಟ್ರೇಲಿಯಾ ಉದ್ಯಮಿಯಿಂದ ವಿಚ್ಚೇದನ ಪಡೆದು 2012ರಲ್ಲಿ ಆಯೆಶಾ ಡೆಲ್ಲಿ ಮೂಲದ ಧವನ್ ಅವರನ್ನು ವಿವಾಹವಾಗಿದ್ದರು.

ಶಿಖರ್ ಧವನ್ ಹಾಗೂ ಆಯೆಶಾ ಮುಖರ್ಜಿ ದಂಪತಿಗೆ ಜೊರಾವರ್ ಹೆಸರಿನ ಗಂಡು ಮಗುವಿದೆ. ಇದಷ್ಟೇ ಅಲ್ಲದೇ ಮೊದಲ ಪತಿಯಿಂದ ಪಡೆದ ಇಬ್ಬರು ಹೆಣ್ಣು ಮಕ್ಕಳು ಧವನ್ ಹಾಗೂ ಆಯೆಶಾ ಜತೆಯೇ ವಾಸವಾಗಿದ್ದರು.

ವಿವಾಹ ವಿಚ್ಚೇದನ ಎನ್ನುವುದು ಬಹಳ ಕೆಟ್ಟ ಪದ ಎನ್ನುವುದು ಗೊತ್ತಿತ್ತು. ಆದರೆ ನನ್ನ ಜೀವನದಲ್ಲೀಗ ಎರಡನೇ ಬಾರಿಗೆ ವಿಚ್ಚೇದನ ಪಡೆಯುವಂತಾಗಿದೆ ಎಂದು ಆಯೆಶಾ ಮುಖರ್ಜಿ ಭಾವನಾತ್ಮಕ ಪತ್ರ ಬರೆದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.
 

ಕೆಲವೊಂದು ತಮಾಷೆಯ ಪದಗಳು ಇಷ್ಟೊಂದು ಕಠಿಣವಾದ ಅರ್ಥವನ್ನು ಹೊಂದಿರುತ್ತವೆ ಎನ್ನುವುದು ಎರಡನೇ ಬಾರಿ ನನ್ನ ಜೀವನದಲ್ಲಿ ನಡೆದಾಗಲೇ ಅರ್ಥವಾಗುತ್ತಿದೆ. ನನಗೆ ಈ ಮೊದಲೇ ಡೈವರ್ಸ್ ಆದ ಅನುಭವವಿದೆ. ಮೊದಲ ಬಾರಿ ಡೈವರ್ಸ್‌ ಪಡೆದಾಗ ನಾನು ಸಾಕಷ್ಟು ಹೆದರಿದ್ದೆ. ಆಗ ನಾನೇನೋ ತಪ್ಪು ಮಾಡಿದ್ದೇನೆ ಎಂದು ಅನಿಸಿತ್ತು ಎಂದು ಆಯೆಶಾ ಮುಖರ್ಜಿ ಬರೆದುಕೊಂಡಿದ್ದಾರೆ.
 

ಮುಂದುವರೆದು, ಎರಡನೇ ಬಾರಿ ನನ್ನ ಜೀವನದಲ್ಲಿ ಡೈವರ್ಸ್‌ ಘಟಿಸುತ್ತಿರುವುದಕ್ಕೆ ಸಾಕಷ್ಟು ನೋವಾಗುತ್ತಿದೆ. ನಾನು ಇನ್ನು ಮುಂದೆ ಡೈವರ್ಸ್‌ಗೆ ಹೊಸ ಅರ್ಥ ನೀಡಲು ಬಯಸುತ್ತೇನೆ. ಡೈವರ್ಸ್ ಎಂದರೆ ನನ್ನ ಹೊಸ ಬದುಕನ್ನು ಹುಡುಕಿಕೊಳ್ಳುವುದು, ಮದುವೆ ಎನ್ನುವ ಹೆಸರಿನಲ್ಲಿ ನನ್ನ ತನವನ್ನು ತ್ಯಾಗಮಾಡುವುದಲ್ಲ ಎಂದು ಬರೆದುಕೊಂಡಿದ್ದಾರೆ.

ಮೆಲ್ಬರ್ನ್ ಮೂಲದ ಆಯೆಶಾ ಮುಖರ್ಜಿ ವೃತ್ತಿಪರ ಬಾಕ್ಸರ್‌ ಆಗಿದ್ದರು. ಧವನ್‌ ವಿವಾಹದ ಬಳಿಕ ಆಯೆಶಾ ತಮ್ಮ ಪುತ್ರನ ಜತೆ ಒಟ್ಟೊಟ್ಟಾಗಿಯೇ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದರ ಜತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದರು.
 

ಇತ್ತೀಚೆಗಷ್ಟೇ ಮುಕ್ತಾಯವಾದ ಶ್ರೀಲಂಕಾ ವಿರುದ್ದದ ಸೀಮಿತ ಓವರ್‌ಗಳ ಸರಣಿಯಲ್ಲಿ ಶಿಖರ್ ಧವನ್ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು, ಇದೀಗ ಯುಎಇನಲ್ಲಿ ನಡೆಯಲಿರುವ 14ನೇ ಆವೃತ್ತಿಯ ಐಪಿಎಲ್‌ ಭಾಗ-2 ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಅಬ್ಬರಿಸಲು ಗಬ್ಬರ್‌ ಸಿಂಗ್ ಸಿದ್ದತೆ ನಡೆಸುತ್ತಿದ್ದಾರೆ.

click me!