ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್ ಆದ ಬಳಿಕ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ಕ್ರಿಕೆಟ್ ತಂಡವು ಹಲವಾರು ಸ್ಮರಣೀಯ ಗೆಲುವುಗಳನ್ನು ಸಾಧಿಸಿದೆ. ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಅಭಿಯಾನ ಮುಗಿಯುತ್ತಿದ್ದಂತೆಯೇ ರವಿಶಾಸ್ತ್ರಿ ಒಪ್ಪಂದಾವಧಿಯೂ ಮುಕ್ತಾಯವಾಗಿದೆ.
ರವಿಶಾಸ್ತ್ರಿ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮೀಸ್‌ಗೇರಲು ವಿಫಲವಾಗಿತ್ತು. ರವಿಶಾಸ್ತ್ರಿ ಮಾರ್ಗದರ್ಶನದಲ್ಲಿ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗದಿದ್ದರೂ, ವಿವಿಧ ದ್ವಿಪಕ್ಷೀಯ ಸರಣಿ ಗೆಲ್ಲುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ.
ಟೀಂ ಇಂಡಿಯಾ ಕೋಚ್ ಹುದ್ದೆಯಿಂದ ಕೆಳಗಿಳಿದು ಒಂದು ವಾರ ಕಳೆಯುತ್ತಿದ್ದಂತೆಯೇ, ರವಿಶಾಸ್ತ್ರಿ ತಮ್ಮ ಮುಂದಿನ ಕನಸನ್ನು ಬಿಚ್ಚಿಟ್ಟಿದ್ದಾರೆ. ಲೆಜೆಂಡ್ ಲೀಗ್ ಕ್ರಿಕೆಟ್ (LLC) ಟೂರ್ನಿಯ ಕಮಿಷನರ್ ಆಗಿ ರವಿಶಾಸ್ತ್ರಿ ನೇಮಕವಾಗಿದ್ದಾರೆ. ಈ ಟೂರ್ನಿಯಲ್ಲಿ ಜಗತ್ತಿನ ದಿಗ್ಗಜ ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ.
ಈ ಟೂರ್ನಿಗೆ ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ರವಿಶಾಸ್ತ್ರಿ ಮತ್ತಷ್ಟು ಮೆರಗು ತಂದುಕೊಡಲಿದ್ದಾರೆ. ಚೊಚ್ಚಲ ಅವೃತ್ತಿಯ ಲೆಜೆಂಡ್ ಲೀಗ್ ಕ್ರಿಕೆಟ್ ಟೂರ್ನಿಯು ಮುಂಬರುವ ಜನವರಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನಲ್ಲಿ ಜರುಗಲಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡದ ದಿಗ್ಗಜ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಲೆಜೆಂಡ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮೂರು ತಂಡಗಳು ಪಾಲ್ಗೊಳ್ಳಲಿದ್ದು, ಭಾರತ, ಏಷ್ಯಾ ಹಾಗೂ ರೆಸ್ ಆಫ್ ದಿ ವರ್ಲ್ಡ್(ವಿಶ್ವ ಇಲೆವನ್) ತಂಡಗಳು ಸೆಣಸಾಟ ನಡೆಸಲಿದ್ದು, ದಿಗ್ಗಜ ಆಟಗಾರರ ಪ್ರದರ್ಶನ ಕಣ್ತುಂಬಿಕೊಳ್ಳಲು ಮತ್ತೊಂದು ಅವಕಾಶ ಬಂದೊದಗಿದೆ.
ಭಾರತ ಹಾಗೂ ನ್ಯಾಷನಲ್ ಕ್ರಿಕೆಟ್ ಅಕಾಡಮಿಯಲ್ಲಿ ಡೈರೆಕ್ಟರ್ ಆಫ್ ಸ್ಪೋರ್ಟ್ಸ್ ಸೈನ್ಸ್ ಮುಖ್ಯಸ್ಥರಾಗಿದ್ದ ಆಂಡ್ರ್ಯೂ ಲೀಪಸ್ ಕೂಡಾ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಆಟಗಾರರ ಫಿಟ್ನೆಸ್ ಮೇಲೆ ಗಮನವಿಡಲಿದ್ದಾರೆ.
ಲೆಜೆಂಡ್ ಲೀಗ್ ಕ್ರಿಕೆಟ್ ಟೂರ್ನಿಯ ಭಾಗವಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಯಾಕೆಂದರೆ ಮತ್ತೆ ನಾನು ಕ್ರಿಕೆಟ್ ಜತೆ ಸಂಪರ್ಕ ಮುಂದುವರೆಸಲು ಇದು ಅವಕಾಶ ಮಾಡಿಕೊಟ್ಟಿದೆ. ದಿಗ್ಗಜ ಕ್ರಿಕೆಟಿಗರು ಖುಷಿಯಿಂದ ಆಡಲು ಹಾಗೂ ಅಭಿಮಾನಿಗಳಿಗೆ ಸ್ಪರ್ಧಾತ್ಮಕ ಕ್ರಿಕೆಟ್ ನೋಡಲು ಸಿಗಲಿದೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಕೆಲವು ತಾರಾ ದಿಗ್ಗಜ ಆಟಗಾರರು ತಮ್ಮನ್ನು ತಾವು ಸಾಬೀತುಪಡಿಸುವಂತದ್ದು ಏನೂ ಇಲ್ಲ. ಅವರೆಲ್ಲಾ ತಮ್ಮದೇ ಆದ ಗೌರವ ಹಾಗೂ ಘನತೆ ಹೊಂದಿದ್ದಾರೆ. ಈಗ ಅವರೆಲ್ಲ ಹೇಗೆ ಆಡುತ್ತಾರೆ ಎನ್ನುವ ಕುತೂಹಲವಿದೆ. ನಾನಂತೂ ಈ ಟೂರ್ನಿಯ ಭಾಗವಾಗುತ್ತಿರುವುದಕ್ಕೆ ಥ್ರಿಲ್ ಆಗಿದ್ದೇನೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.