ವಿಶ್ವಕಪ್‌ಗೆ ಕ್ಷಣಗಣನೆ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಹೇಳಿದ ಸ್ಟಾರ್ ಕ್ರಿಕೆಟಿಗ..!

First Published | Aug 4, 2023, 5:15 PM IST

ಬೆಂಗಳೂರು: 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ಸ್ಟಾರ್ ಕ್ರಿಕೆಟಿಗ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ಜರುಗಲಿದ್ದು, ಇದೇ ಮೊದಲ ಬಾರಿಗೆ ಸಂಪೂರ್ಣ ಟೂರ್ನಿಗೆ ಭಾರತ ಆತಿಥ್ಯವನ್ನು ವಹಿಸಿದೆ.

ಹೀಗಿರುವಾಗಲೇ ಹಾಲಿ ಚಾಂಪಿಯನ್‌ ಇಂಗ್ಲೆಂಡ್ ತಂಡದ ಸ್ಪೋಟಕ ಆರಂಭಿಕ ಬ್ಯಾಟರ್‌ ಅಲೆಕ್ಸ್ ಹೇಲ್ಸ್, ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಅಲೆಕ್ಸ್‌ ಹೇಲ್ಸ್‌ ಅವರು 34ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದಾರೆ.

Latest Videos


ಇಂಗ್ಲೆಂಡ್ 2022ರಲ್ಲಿನ ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ತಂಡದ ಸದಸ್ಯರಾಗಿದ್ದ ಅಲೆಕ್ಸ್ ಹೇಲ್ಸ್, ಕಳೆದ ವರ್ಷದ ನವೆಂಬರ್‌ನಲ್ಲಿ ಪಾಕಿಸ್ತಾನ ವಿರುದ್ದ ಎಂಸಿಜಿ ಮೈದಾನದಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದರು.

ನಿವೃತ್ತಿ ಘೋಷಿಸಿದ ಬಳಿಕ ಮಾತನಾಡಿರುವ ಹೇಲ್ಸ್‌, "ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಒಟ್ಟು 156 ಬಾರಿ ನನ್ನ ದೇಶವಾದ ಇಂಗ್ಲೆಂಡ್‌ ತಂಡವನ್ನು ಪ್ರತಿನಿಧಿಸಲು ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಸೌಭಾಗ್ಯ ಎಂದು ಭಾವಿಸುತ್ತೇನೆ. ಈ ತಂಡದ ಜತೆಗೆ ಸಾಕಷ್ಟು ಅವಿಸ್ಮರಣೀಯ ನೆನಪುಗಳು ನನ್ನ ಜತೆಗಿವೆ. ಈ ಪಯಣದಲ್ಲಿ ಜೀವಮಾನದ ಗೆಳೆಯರು ಸಿಕ್ಕಿದ್ದಾರೆ. ನಿವೃತ್ತಿ ಘೋಷಿಸಲು ಇದು ಸರಿಯಾದ ಸಮಯವೆಂದು ಈ ನಿರ್ಧಾರ ತೆಗೆದುಕೊಂಡಿದ್ದೇನೆ" ಎಂದು ಹೇಳಿದ್ದಾರೆ.

ಕಳೆದ ಟಿ20 ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ಪಾಲಿನ ಲೀಗ್ ಹಂತದ ಕೊನೆಯ ಎರಡು ಪಂದ್ಯಗಳಲ್ಲಿ ನ್ಯೂಜಿಲೆಂಡ್ & ಶ್ರೀಲಂಕಾ ವಿರುದ್ದ ಕ್ರಮವಾಗಿ 52& 47 ರನ್ ಬಾರಿಸಿದ್ದರು. ಇನ್ನು ಭಾರತ ಎದುರಿನ ಸೆಮಿಫೈನಲ್‌ನಲ್ಲಿ ಅಲೆಕ್ಸ್ ಹೇಲ್ಸ್ ಅಜೇಯ 86 ರನ್ ಚಚ್ಚಿದ್ದರು.
 

ಅಡಿಲೇಡ್‌ನಲ್ಲಿ ನಡೆದಿದ್ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ ವಿರುದ್ದ ತಾವು ಆಡಿದ ಇನಿಂಗ್ಸ್‌, ನನ್ನ ಕ್ರಿಕೆಟ್‌ ಜೀವನದ ಅತ್ಯುತ್ತಮ ಇನಿಂಗ್ಸ್‌ಗಳಲ್ಲಿ ಒಂದು ಎಂದು ಬಣ್ಣಿಸಿದ್ದಾರೆ. ಭಾರತ ಎದುರು ಇಂಗ್ಲೆಂಡ್ ಸೆಮೀಸ್‌ನಲ್ಲಿ 10 ವಿಕೆಟ್ ಅಂತರದ ಜಯ ಸಾಧಿಸಿತ್ತು.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಲೆಕ್ಸ್ ಹೇಲ್ಸ್‌ ಗುಡ್‌ ಬೈ ಹೇಳಿದ್ದರೂ ಸಹಾ, ತಾವು ಟಿ20 ಲೀಗ್‌ಗಳಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಅಲೆಕ್ಸ್ ಹೇಲ್ಸ್, ಪಾಕಿಸ್ತಾನ ಸೂಪರ್ ಲೀಗ್, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.

ಅಲೆಕ್ಸ್ ಹೇಲ್ಸ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಆಡಿ 4 ವರ್ಷಗಳೇ ಕಳೆದಿವೆ. ಈ ಬಾರಿಯ ಏಕದಿನ ವಿಶ್ವಕಪ್‌ಗೆ ಇಂಗ್ಲೆಂಡ್‌ ತಂಡದಲ್ಲಿ ಸ್ಥಾನ ಪಡೆಯುವ ರೇಸ್‌ನಲ್ಲಿ ಅಲೆಕ್ಸ್‌ ಇರಲಿಲ್ಲ. ಆದರೆ 2024ರ ಟಿ20 ವಿಶ್ವಕಪ್‌ ಟೂರ್ನಿಗೆ ಹೇಲ್ಸ್ ನಿವೃತ್ತಿ ಕೊಂಚ ಹಿನ್ನಡೆಯಾಗುವ ಸಾಧ್ಯತೆಯಿದೆ.

2019ರ ಏಕದಿನ ವಿಶ್ವಕಪ್ ಆರಂಭಕ್ಕೆ ಕೇವಲ ಒಂದು ತಿಂಗಳು ಬಾಕಿ ಇದ್ದಾಗ ಅಲೆಕ್ಸ್ ಹೇಲ್ಸ್ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದರು. ಪರಿಣಾಮ ಇಂಗ್ಲೆಂಡ್ ಏಕದಿನ ತಂಡದಿಂದ ಹೊರಬಿದ್ದಿದ್ದರು. ಇದಾದ ಬಳಿಕ ಶಾಶ್ವತವಾಗಿ ಅಲೆಕ್ಸ್ ಹೇಲ್ಸ್‌ಗೆ ಇಂಗ್ಲೆಂಡ್ ಏಕದಿನ ತಂಡದ ಬಾಗಿಲು ಮುಚ್ಚಿತು.

click me!